ಬಾಗಲಕೋಟೆ: ರಾಮಮಂದಿರ ವಿವಾದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರದಲ್ಲಿ ನಮ್ಮದೇ ಗೆಲುವು ಎಂಬಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎನ್ನುವ ಮೂಲಕ 1994 ರ ಫಾರೂಖಿ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪು ಯಾರ ಗೆಲುವೂ ಅಲ್ಲ, ಯಾರ ಸೋಲೂ ಅಲ್ಲ. ಎರಡೂ ಸಮುದಾಯದವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಇದು ನಮ್ಮ ಗೆಲುವು ಎಂದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ತೀರ್ಪು ಎರಡೂ ಸಮಯದಾಯಗಳಿಗೆ ಸಮಾಧಾನ ತರುವಂತೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಬಿಬಿಎಂಪಿ ಮೇಯರ್ ಚುನಾವಣೆ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲ್ಲೋದು. ನಮಗೇ ಜಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಇದೇ ಅಕ್ಟೋಬರ್ 3ರ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.
ಈಗಾಗಲೇ ಬಹಳಷ್ಟು ಜನ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಖಾಲಿ ಇರುವ ಒಟ್ಟು 6 ಸ್ಥಾನಗಳನ್ನು ಏಕಕಾಲಕ್ಕೆ ಭರ್ತಿ ಮಾಡುತ್ತೇವೆ. ಕಾಂಗ್ರೆಸ್ಸಿನ ಐದು ಜೆಡಿಎಸ್ ಒಬ್ಬರನ್ನು ಸಚಿವರನ್ನಾಗಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದ ಅವರು ಯಾರಿಗೆ ಸ್ಥಾನ ಸಿಗುತ್ತದೆ ಎಂದು ಸ್ಪಷ್ಟಪಡಿಸಲಿಲ್ಲ. ಅಲ್ಲದೆ ಇಪ್ಪತ್ತು ಜನ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದೆಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply