ರಾಮ ಮಂದಿರ ನಿರ್ಮಾಣದ ದಾರಿ ಸುಗಮ -ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಆಯೋಧ್ಯೆ ರಾಮ ಮಂದಿರ ನಿರ್ಮಾಣದ ದಾರಿ ಸುಗಮವಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ 1994ರ ಫಾರೂಖಿ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಆದೇಶವನ್ನು ಸ್ವಾಗತಿಸಿದರು.

ಈ ತೀರ್ಪಿನಿಂದ ನಮಗೆ ಜಯ ಸಿಕ್ಕಿಲ್ಲ. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನನ್ನ ಹೋರಾಟಕ್ಕೆ ಶಕ್ತಿ ಬಂದಿದೆ. ಆಸ್ತಿಯ ಹಕ್ಕಿಗಿಂತಲೂ ಪ್ರಾರ್ಥನೆ ಮಾಡುವ ಹಕ್ಕು ದೊಡ್ಡದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ ಎಂದರು.

ಸುನ್ನಿ ವಕ್ಫ್ ಬೋರ್ಡ್ ನವರ ಆಸ್ತಿ ಹಕ್ಕಿನ ವಾದಕ್ಕಿಂತಲೂ ರಾಮ ಹುಟ್ಟಿದ್ದ ಸ್ಥಳದಲ್ಲಿ ಪ್ರಾರ್ಥನೆ ಮಾಡುವ ವಾದವೇ ಮೇಲ್ಮಟ್ಟದ್ದು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಹೀಗಾಗಿ ಶುಕ್ರವಾರವೇ(ನಾಳೆ) ರಾಮ ಜನ್ಮಭೂಮಿಯಾದ ಆಯೋಧ್ಯೆಯಲ್ಲಿ ಪೂಜೆ ಮಾಡುವ ಹಕ್ಕಿನ ಸಂಬಂಧ ನಾನು ಸಲ್ಲಿಸಿದ್ದ ಅರ್ಜಿಯನ್ನು ಆರಂಭದಲ್ಲೇ ಪರಿಗಣಿಸುವಂತೆ ಕೋರ್ಟ್ ಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಸುಬ್ರಮಣಿಯನ್ ಸ್ವಾಮಿ ಈ ಹಿಂದೆಯೇ ರಾಮಜನ್ಮಭೂಮಿಯಲ್ಲಿ ಪೂಜೆ ಹಕ್ಕಿನ ಸಂಬಂಧ ಅರ್ಜಿ ಸಲ್ಲಿಸಿದ್ದರು. ಆದರೆ 1994ರ ಫಾರೂಖಿ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡ ಬಳಿಕ ನಿಮ್ಮ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಸುಬ್ರಮಣಿಯನ್ ಸ್ವಾಮಿಗೆ ತಿಳಿಸಿತ್ತು.

ಮುಸ್ಲಿಂ ರಾಷ್ಟ್ರಗಳಲ್ಲಿ ಮಸೀದಿಯನ್ನು ಎಲ್ಲಿ ಬೇಕಾದರೂ ಸ್ಥಳಾಂತರಿಸಬಹುದು. ಉದಾಹರಣೆಗೆ ರಸ್ತೆ ನಿರ್ಮಾಣ ಸೇರಿದಂತೆ ಸಾರ್ಜಜನಿಕ ಅನೂಕೂಲಕ್ಕಾಗಿ ಸ್ಥಳಾಂತರಿಸಲಾಗುತ್ತದೆ. ಆದರೆ, ದೇವಸ್ಥಾನಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಆಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಬೇಕೆಂಬುದನ್ನು ಬಿಟ್ಟು, ಅಯೋಧ್ಯೆಯ ಸರಯೂ ನದಿ ದಡದಲ್ಲಿ ಮುಸ್ಲಿಮರು ಬಾಬ್ರಿ ಮಸೀದಿ ನಿರ್ಮಿಸಿಕೊಳ್ಳಬಹುದು. ಆದರೆ, ಪ್ರಸ್ತುತ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಯಾಕೆಂದರೆ ಅದು ರಾಮನ ಜನ್ಮ ಭೂಮಿ ಎಂದು ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಪ್ರತಿಕ್ರಿಯಿಸಿದ್ದರು.

ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ.

ಸುಪ್ರೀಂ ಹೇಳಿದ್ದು ಏನು?
ಮಸೀದಿ ಇಸ್ಲಾಮ್‍ನ ಅವಿಭಾಜ್ಯ ಅಂಗವಲ್ಲ ಅಂತ 1994ರ ಡಾ. ಇಸ್ಮಾಯಿಲ್ ಫಾರೂಖಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಏಕ ತೀರ್ಪು ನೀಡಿದ್ದರೆ, ನ್ಯಾ. ನಜೀರ್ ಭಿನ್ನ ತೀರ್ಪು ನೀಡಿದ್ದಾರೆ. 1994ರ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಪ್ರಕರಣವನ್ನು ವಿಸ್ತøತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಮಂದಿರ, ಚರ್ಚ್ ಅಥವಾ ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ.

ತೀರ್ಪಿನಲ್ಲಿರುವ ಪ್ರಮುಖ ಅಂಶ ಏನು?
* ಮಸೀದಿಯಲ್ಲೇ ನಮಾಜ್ ಮಾಡಬೇಕು ಅಂತ ಏನಿಲ್ಲ
* ಮುಸ್ಲಿಮರು ಎಲ್ಲಿ ಬೇಕಾದ್ರೂ ನಮಾಜ್ ಮಾಡಬಹುದು
* ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ
* ಯಾವ ಸನ್ನಿವೇಶದಲ್ಲಿ ಫಾರೂಖಿ ತೀರ್ಪು ಬಂದಿದೆ ಅನ್ನೋದು ಮುಖ್ಯ
* ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದು
* ಫಾರೂಖಿ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮಾತ್ರ ಅಭಿಪ್ರಾಯ ಕೇಳಲಾಗಿದೆ
* ಭೂಸ್ವಾಧೀನದಿಂದ ರಕ್ಷಣೆ ನೀಡುವ ಸನ್ನಿವೇಶದಲ್ಲಷ್ಟೇ ಫಾರೂಖಿ ತೀರ್ಪು ನೀಡಲಾಗಿದೆ
* 7 ಸದಸ್ಯರ ಸಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವ ಅಗತ್ಯತೆ ಇಲ್ಲ

ನ್ಯಾ. ನಜೀರ್ ನೀಡಿದ ಭಿನ್ನ ತೀರ್ಪೇನು?
* ಇನ್ನಿತ್ತರ ಇಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳು ನೀಡಿರೋ ತೀರ್ಪಿಗೆ ಸಹಮತವಿಲ್ಲ
* ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಅನ್ನೋದರ ಬಗ್ಗೆ ಚರ್ಚೆಯಾಗಬೇಕು
* ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು

ಏನಿದು ಪ್ರಕರಣ?
ಇಸ್ಮಾಯಿಲ್ ಫಾರೂಖಿ ವರ್ಸಸ್ ಭಾರತ ಸರ್ಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಖಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *