ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

ಬೆಂಗಳೂರು: ನನ್ನ ಹೆಂಡತಿ ನನ್ನ ಮಾತೇ ಕೇಳುವುದಿಲ್ಲ ಸಾರ್, ನೀವೇ ನನ್ನ ಹೆಂಡತಿಯನ್ನ ಕಂಟ್ರೋಲ್ ಮಾಡಬೇಕು ಸಾರ್ ಎಂದು ಕೈಮುಗಿದುಕೊಂಡು ರೌಡಿಶೀಟರ್ ಯಶಸ್ವಿನಿಯ ಎರಡನೇ ಪತಿ ದಡಿಯಾ ಮಹೇಶ್ ಪೊಲೀಸರ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಇಂದು ಸಿಸಿಬಿ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ ಸಿಸಿಬಿ ಪೊಲೀಸರು ದಡಿಯಾ ಮಹೇಶ್‍ಗೆ ನಿನ್ನ ಹೆಂಡತಿಯೂ ರೌಡಿಶೀಟರ್, ಆಕೆಯನ್ನು ಕಂಟ್ರೋಲ್‍ನಲ್ಲಿ ಇಡು ಅಂತ ಹೇಳಿದ್ದಾರೆ. ಆಗ ನಾನು ಎಲ್ಲಾ ತರದಲ್ಲೂ ಬುದ್ಧಿ ಹೇಳಿದ್ದೇನೆ. ಆದರೆ ಅವಳು ನನ್ನ ಮಾತೇ ಕೇಳುವುದಿಲ್ಲ ಸರ್. ನಿಮ್ಮಂಥವರೇ ಅವಳಿಗೆ ಬುದ್ಧಿ ಕಲಿಸಿದರೆ ಕಲಿತಾಳೆ ಸಾರ್ ಅಂತ ಸಿಸಿಬಿ ಡಿಸಿಪಿ ಗಿರೀಶ್ ಮುಂದೆ ದಡಿಯಾ ಮಹೇಶ್ ಮನವಿ ಮಾಡಿಕೊಂಡಿದ್ದಾನೆ.

ರೌಡಿಶೀಟರ್ ಮಹೇಶ್ ಮನೆಯಲ್ಲಿ ಆಕೆಯ ಹೆಂಡತಿಯ ಫೋಟೋ ಮತ್ತು ಪಿಸ್ತೂಲ್ ಸಿಕ್ಕಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಪ್ರತಿಕ್ರಿಸಿದ ಡಿಸಿಪಿ ಗಿರೀಶ್ ಅವರು, ನಿನ್ನ ಹೆಂಡತಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ನಿಮ್ಮ ಮನೆಯಲ್ಲಿ ಸಿಕ್ಕ ಪಿಸ್ತೂಲ್ ಬಗ್ಗೆ ತನಿಖೆ ಮಾಡುತ್ತೇವೆ. ನಿನ್ನ ಮತ್ತು ನಿನ್ನ ಜೊತೆ ನಿನ್ನ ಹೆಂಡತಿಯನ್ನ ಕೂಡಲೇ ಸರಿ ಮಾಡುತ್ತೇವೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಶಿಸ್ತು ಸಂಸ್ಕೃತಿ ಎನ್ನುವ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ರೌಡಿ ಶೀಟರ್ ಯಶಸ್ವಿನಿ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿಯೇ ಹಾರ ಹಾಕಿಸಿಕೊಳ್ಳುವ ಮೂಲಕ ಯಶಸ್ವಿನಿ ಗೌಡಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತಾಲಿಕ್ ಹಾಗೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಯಶಸ್ವಿನಿ ಗೌಡ ಅವರಿಗೆ ಅಧಿಕಾರ ನೀಡಲಾಗಿದೆ.

ಯಶಸ್ವಿನಿ ಗೌಡ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಕೂಡ ಲಭಿಸಿದೆ. ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ರೌಡಿಶೀಟರ್ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *