ಮಹಿಳೆಯನ್ನ ಜೀಪ್ ಮೇಲೆ ಕಟ್ಟಿ, ನಗರ ಸುತ್ತಾಡಿಸಿ ಪೊಲೀಸರಿಂದ ಅಮಾನವೀಯ ಕೃತ್ಯ

ಚಂಡೀಗಡ: ಪೊಲೀಸರು 35 ವರ್ಷದ ಮಹಿಳೆಯನ್ನು ಆಕೆಯ ಗ್ರಾಮದಿಂದ ಬಲವಂತವಾಗಿ ಜೀಪ್ ಮೇಲೆ ಕಟ್ಟಿ ಹಾಕಿ ಇಡೀ ನಗರವನ್ನು ಸುತ್ತಾಡಿಸಿರುವ ಅಮಾನವೀಯ ಘಟನೆ ಪಂಜಾಬಿನ ಅಮೃತಸರ ಜಿಲ್ಲೆಯ ನಡೆದಿದೆ.

ಪಂಜಾಬ್ ಪೊಲೀಸರ ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಹಿಳೆಯನ್ನು ಜೀಪ್ ಮೇಲೆ ಕಟ್ಟಿ ಹಾಕಿ ನಗರ ಸುತ್ತಾಡಿಸುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯ ಮಾವನನ್ನು ಬಂಧಿಸಲು ಹೋಗಿದ್ದಾಗ ಈ ರೀತಿಯಾಗಿ ಮಾಡಿದ್ದಾರೆ.

ಪೊಲೀಸ್ ಜೀಪ್ ಮೇಲೆ ಮಹಿಳೆ ಮಲಗಿದ್ದು, ಆಕೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೇಳೆ ಮಹಿಳೆ ಜೀಪಿನಿಂದ ಕೆಳಗೆ ಬಿದ್ದಿದ್ದರಿಂದ ಆಕೆಯ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಮಹಿಳೆಯನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪೊಲೀಸರು ಮಹಿಳೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.

ಅಮೃತಸರ ಜಿಲ್ಲೆಯ ಷಾಝಾಡಾ ಹಳ್ಳಿಯಲ್ಲಿ ಪೊಲೀಸ್ ಇಲಾಖೆಯ ತಂಡವು ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನಮ್ಮ ಮಾವ ಬಲ್ವಂತ್ ಸಿಂಗ್ ನನ್ನು ಬಂಧಿಸಲು ಮನೆಯ ಮೇಲೆ ದಾಳಿ ನಡೆಸಿದ್ದರು. ಆದರೆ ಮನೆಯಲ್ಲಿ ಮಾವ ಪತ್ತೆಯಾಗಿಲ್ಲ. ನಂತರ ಪೊಲೀಸರು ನನ್ನನ್ನು ವಾಹನದ ಮೇಲೆ ಕುಳಿತುಕೊಳ್ಳುವಂತೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ಆರೋಪಿ ಏನು ಅಲ್ಲ. ಆಕೆಯ ಮಾವವನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕುಟುಂಬದವರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ವಾಹನದ ಮೇಲೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಆದ್ದರಿಂದ ಕುರಿತು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ತೇಜಿಂದರ್ ಸಿಂಗ್ ಮೌರ್ ತಿಳಿಸಿದ್ದಾರೆ.

ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡುವವರೆಗೂ ನಾನು ಮಹಿಳೆಯ ಆರೋಪದ ಬಗ್ಗೆ ಮಾತನಾಡುವುದಿಲ್ಲ. ಪೋಲಿಸ್ ತಂಡ ಈಗ ನಮ್ಮನ್ನು ಸಂಪರ್ಕಿಸಿದೆ. ಪೋಲೀಸ್ ತಂಡದ ಮೇಲೆ ದಾಳಿ ಮಾಡಿ ಪೊಲೀಸ್ ವಾಹನವನ್ನು ಹಾನಿಗೊಳಿಸಿದ್ದಕ್ಕಾಗಿ ಆಕೆಯ ವಿರುದ್ಧ ದೂರು ದಾಖಲಾಗಿದೆ ಎಂದು ಸೂಪರಿಟೆಂಡೆಂಟ್ ಪೊಲೀಸ್ ಪರ್ಮಲ್ ಸಿಂಗ್ ಹೇಳಿದ್ದಾರೆ.

ಇನ್ಸ್ ಪೆಕ್ಟರ್ ವಿಜಯ್ ಪ್ರತಾಪ್ ಸಿಂಗ್ ಈ ಆರೋಪಗಳನ್ನು ನಿರಾಕರಿಸಿ ಈ ಫಟನೆ ಕುರಿತು ತನಿಖೆ ನಡೆಸಲಾಗುವುದು ಮತ್ತು ಸತ್ಯಾಸತ್ಯತೆಯನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *