ಅಲೋಕ್ ಕುಮಾರ್ ಖದರ್‌ಗೆ ಬೆಂಗಳೂರು ಮಹಿಳೆಯರು ಫಿದಾ!

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ಕಾರ್ಯಕ್ಕೆ ಬೆಂಗಳೂರಿನ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದು, ಅಲೋಕ್ ಕುಮಾರ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.

ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು ಅಡ್ಡೆ, ಇಸ್ಪೀಟ್ ದಂಧೆ, ಗ್ಯಾಬ್ಲಿಂಗ್ ಅಡ್ಡ ಹಾಗೂ ಕ್ಲಬ್ ಮೇಲೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಎಡಿಜಿಪಿ ಅಲೋಕ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಮಹಿಳೆಯರು ತಿಳಿಸಿದ್ದಾರೆ. ಕುರುಬರಹಳ್ಳಿ ಮಹಿಳಾ ಸಂಘದಿಂದ ಸಂಭ್ರಮಾಚರಣೆ ನಡೆದಿದ್ದು, ಜೂಜು ಅಡ್ಡೆಯ ಮೇಲೆ ದಾಳಿ ನಡೆಯುತ್ತಿರುವುದರಿಂದ ಮಹಿಳೆಯರು ನೆಮ್ಮದಿಯಿಂದ ಇರಬಹುದು. ಅಲೋಕ್ ಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಉತ್ತಮ ಕಾರ್ಯ ಮುಂದುವರಿಸಲಿ ಎಂದು ತಿಳಿಸಿದ್ದಾರೆ.

ಅಲೋಕ್ ಕುಮಾರ್ ಅವರನ್ನು ನೇರ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಈ ರೀತಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ಅವರನ್ನು ನೇರ ಭೇಟಿ ಮಾಡಲು ಅವಕಾಶ ಕೇಳಿದ್ದು ಭೇಟಿ ಮಾಡಿ ಶುಭ ಕೋರುತ್ತವೆ. ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಅಲೋಕ್ ಕುಮಾರ್ ಅವರು ಹೆಚ್ಚಿನ ಕ್ರಮಕೈಗೊಂಡಿದ್ದಾರೆ ಎಂದು ಮಹಿಳಾ ಸಂಘದ ಗೀತಾ ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅಲೋಕ್ ಕುಮಾರ್ ಅವರ ಆದೇಶದ ಮೇರೆಗೆ ಸಿಸಿಬಿ ಪೊಲೀಸರು ಮೆಜೆಸ್ಟಿಕ್, ಚಿಕ್ಕಪೇಟೆ, ಬಳೇಪೇಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 38 ಲಕ್ಷ ರೂ. ನಗದು, ಹಣ ಲೆಕ್ಕ ಮಾಡುವ ಮಷಿನ್‍ಗಳು ಮತ್ತು 26 ಕ್ಲಬ್‍ನ ಮಾಲೀಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದರು. ಪ್ರಮುಖವಾಗಿ ಇಲ್ಲಿನ ಮಹಾಲಕ್ಷ್ಮೀ ಸ್ಪೋಟ್ರ್ಸ್ ಅಂಡ್ ಕ್ಲಬ್, ಕಲ್ಚರಲ್, ಬ್ಲೂಸ್ ಕ್ಲಬ್ ಗಳಲ್ಲಿ ಅಕ್ರಮವಾಗಿ ವಿವಿಧ ರೀತಿಯ ಜೂಜಾಟ ನಡೆಯುತ್ತಿತ್ತು.

ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ನೇಮಕ ಮಾಡಿತ್ತು. ಇದರೊಂದಿಎ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದೆಯೂ ಬೆಂಗಳೂರಿನಲ್ಲಿ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಅಲೋಕ್ ಕುಮಾರ್ ಅವರು ಉತ್ತರ ವಲಯದ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *