ಪತ್ನಿ ಕೊಲೆಗೆ ಸುಪಾರಿ ಕೊಟ್ಟ ಹೆಡ್ ಕಾನ್ ಸ್ಟೇಬಲ್ – ಕೊಲ್ಲಲು ಬಂದವನ ಮನಕರಗಿ ಪೊಲೀಸ್ರಿಗೆ ಶರಣು

ಶಿವಮೊಗ್ಗ: ಬೇರೆ ಯುವತಿಯನ್ನು ಮದುವೆಯಾಗಲು ಕಟ್ಟಿಕೊಂಡ ಪತ್ನಿಯನ್ನು ಕೊಲ್ಲಲು ಪತಿ ಸುಪಾರಿ ಕೊಟ್ಟಿದ್ದನು. ಆದರೆ ಕೊಲ್ಲಲು ಬಂದವನ ಮನಕರಗಿ ಹಿಂದಿರುಗಿದ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.

ಹೆಡ್ ಕಾನ್ ಸ್ಟೇಬಲ್ ರವೀಂದ್ರಗಿರಿ ತನ್ನ ಪತ್ನಿ ಅನಿತಾರ ಕೊಲೆಗೆ ಸುಪಾರಿ ಕೊಟ್ಟಿದ್ದನು. ರವೀಂದ್ರಗಿರಿ ಈ ಮೊದಲು ಆ್ಯಂಟಿ ನಕ್ಸಲ್ ಫೋರ್ಸ್‍ನಲ್ಲೂ ಕೆಲಸ ಮಾಡಿದ್ದನು. ಈಗ ಭದ್ರಾವತಿ ನ್ಯೂಟೌನ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಆಗಿದ್ದಾನೆ.

ರವೀಂದ್ರಗಿರಿ ದಾವಣಗೆರೆ ಮೂಲದ ಅನಿತಾ ಜೊತೆ 9 ವರ್ಷದ ಹಿಂದೆ ಮದುವೆ ಆಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕಳೆದ ನಾಲ್ಕೈದು ವರ್ಷದಿಂದ ರವೀಂದ್ರಗಿರಿಗೆ ಬೇರೆ ಯುವತಿ ಜೊತೆ ಸಂಬಂಧ ಬೆಳೆದಿತ್ತು. ಇದೇ ಕಾರಣದಿಂದ ಪತಿ-ಪತ್ನಿ ನಡುವೆ ಮನಸ್ತಾಪ, ಜಗಳ ನಡೆದಿತ್ತು. ಇದರಿಂದಾಗಿ ಪತ್ನಿಯನ್ನೇ ಮುಗಿಸಿ ಇನ್ನೊಬ್ಬಳನ್ನು ಮದುವೆ ಆಗಲು ಯೋಚಿಸಿದ ಗಿರಿ, ಶಿವಮೊಗ್ಗ ಮೂಲದ ಮೂವರಿಗೆ ಐದು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದನು.

ಅನಿತಾಳನ್ನು ಕೊಲೆ ಮಾಡಲು ಸುಪಾರಿ ಕಿಲ್ಲರ್ ಗಳು ಪ್ರಯತ್ನಿಸಿದ್ದಾರೆ. ಆದರೆ ಮೂರು ಬಾರಿಯೂ ಆಕೆಯ ಜೊತೆ ಆಕೆಯ ಪುಟ್ಟ ಮಕ್ಕಳು ಇರುವುದನ್ನು ಕಂಡು ಅವರ ಮನಸ್ಸು ಕರಗಿದೆ. ಮೂವರಲ್ಲಿ ಒಬ್ಬ ನಾನು ಈ ಕೆಲಸ ಮಾಡುವುದಿಲ್ಲ ಎಂದಿದ್ದಾನೆ. ಆದರೆ ಉಳಿದ ಇಬ್ಬರು ಕೊಲೆ ಮಾಡುವ ಸಾಧ್ಯತೆ ಇರುವುದರಿಂದ ಸೀದಾ ಎಸ್ ಪಿ  ಅಭಿನವ್ ಖರೆ ಅವರಲ್ಲಿ ಶರಣಾಗಿ ವಿಷಯ ತಿಳಿಸಿದ್ದಾನೆ.

ಈಗ ಪತ್ನಿ ಕೊಲೆಗೆ ಸುಪಾರಿ ನೀಡಿದ್ದ ರವೀಂದ್ರಗಿರಿ, ಸುಪಾರಿ ಪಡೆದಿದ್ದ ಫೈರೊಜ್ ಖಾನ್, ಸಯ್ಯದ್ ಇರ್ಫಾನ್, ಸುಹೇಲ್ ಮೂವರನ್ನೂ ನ್ಯೂಟೌನ್ ಪೊಲೀಸರು ಬಂಧಿಸಿ, ಐಪಿಸಿ 120, ಐಪಿಸಿ 307, ಐಪಿಸಿ 34 ಅನ್ವಯ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *