ಗದಗ: ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗದಗ ಹಾಗೂ ಬೆಟಗೇರಿಯ ಅವಳಿ ನಗರಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಚ್.ಕೆ.ಪಾಟೀಲ್‍ರಿಗೆ ಸ್ಥಳೀಯ ನಿವಾಸಿಗಳು ಘೇರಾವ್ ಹಾಕಿದ್ದಾರೆ.
ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಟಗೇರಿಯ ವಾಂಬೆ ಬಡಾವಣೆಯ ಮನೆಗಳಿಗೆ ರಾಜಕಾಲುವೆ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದೆ. ಇದರಿಂದಾಗಿ ಬಡಾವಣೆಯ ಜನ ತತ್ತರಿಸಿ ಹೋಗಿದ್ದಾರೆ. ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಹಾಳಾಗಿ ಹೋಗಿವೆ. ಅಲ್ಲದೆ ಮಹಿಳೆಯರು ಮಕ್ಕಳು ಬೀದಿಗೆ ಬಿದ್ದಿದ್ದಾರೆ.

ರಾತ್ರಿಯಿಡಿ ನಿವಾಸಿಗಳು ಕೊಳಚೆ ನೀರನ್ನು ಹೊರ ಹಾಕುವಲ್ಲಿ ನಿರತರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಕೆ.ಪಾಟೀಲ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. ಅಲ್ಲದೇ ಕೂಡಲೇ ಸಮಸ್ಯೆಗಳನ್ನು ಪರಿಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದರೂ ಕೂಡ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯು ಸ್ಥಳಕ್ಕೆ ಹಾಜರಾಗಿಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರಿಗೆ ಇದೇ ವೇಳೆ ಸ್ಥಳೀಯ ನಿವಾಸಿಗಳು ತಾಕೀತು ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply