ದೇವ್ರಾಣೆಗೂ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ: ಶ್ರೀರಾಮುಲು

ಬೆಂಗಳೂರು: ದೇವರ ಆಣೆಗೂ ಸಹ ಬಿಜೆಪಿಯು ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲವೆಂದು ಶಾಸಕ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಬೀಳಿಸುವುದಕ್ಕೆ ಹೋಗಿಲ್ಲ. ದೇವರ ಆಣೆಗೂ ಸಹ ನಾವು ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಅವರಲ್ಲೇ ವರ್ಗಾವಣೆ ದಂಧೆ ಹಾಗೂ ಹಣದ ವಿಚಾರಕ್ಕಾಗಿ ಅಸಮಾಧಾನ ಉಂಟಾಗಿ ಬಿಜೆಪಿಯ ಮೇಲೆ ಆಪಾದನೆ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೈ ನಾಯಕರು ದೆಹಲಿಗೆ ತೆರಳಿದ್ದಕ್ಕೆ ಪ್ರತಿಕ್ರಿಯಿಸಿ, ಅವರು ದೇಹಲಿಗಾದರೂ ಹೋಗಲಿ, ಇಲ್ಲ ಹಾಳಾಗಿ ಹೋದ್ರು ನಮಗೇನು ಆಗಬೇಕು? ಕಾಂಗ್ರೆಸ್ ನಾಯಕರೇ ಇಂದು ಗುಂಪು ಮಾಡಿಕೊಂಡು ಕಚ್ಚಾಟ ಮಾಡುತ್ತಿದ್ದಾರೆ. ಅವರು ಕಚ್ಚಾಡಿಕೊಂಡು ಅದನ್ನು ಬಿಜೆಪಿ ಮೇಲೆ ಹಾಕುತ್ತಿದ್ದಾರೆ. ಇದೆಲ್ಲಾ ಜನರ ದಿಕ್ಕು ತಪ್ಪಿಸುವ ತಂತ್ರ ಅಷ್ಟೇ. ಈ ಸಮ್ಮಿಶ್ರ ಸರ್ಕಾರದ ಮೇಲೆ ಜನರಿಗೆ ರಾಗಿ ಕಾಳಿನಷ್ಟು ನಂಬಿಕೆಯಿಲ್ಲ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ. ಹೀಗಾಗಿ ಕಾಂಗ್ರೆಸ್ಸಿನ ಯಾವುದೇ ಶಾಸಕರು ಹಾಗೂ ಸಚಿವರ ಮಾತನ್ನು ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅವರ ನಡುವೆ ಕಿತ್ತಾಟ ಏರ್ಪಟ್ಟಿದೆ. ತಮ್ಮಲ್ಲಿಯೇ ಕಚ್ಚಾಟ ಮಾಡಿಕೊಂಡು ಅದನ್ನು ಬಿಜೆಪಿಗೆ ಕಟ್ಟುತ್ತಿದ್ದಾರೆ. ಹೀಗೆ ಮುಂದುವರಿದು ಸರ್ಕಾರ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಕಿತ್ತಾಡಿಕೊಂಡು ಏನಾದರೂ ಮಾಡಿಕೊಳ್ಳಲಿ. ಅವರಿಗೆ ನಮಗೂ ಯಾವುದೇ ಸಂಬಂಧವಿಲ್ಲ. ಸರ್ಕಾರ ಬಿದ್ದರೆ ನಾವು ಖಂಡಿತವಾಗಿಯೂ ಸರ್ಕಾರವನ್ನು ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *