ಕಾಂಗ್ರೆಸ್-ಜೆಡಿಎಸ್ ಕಳ್ಳರ ಪಕ್ಷ, ದರಿದ್ರ ಪಾರ್ಟಿ: ಡಿ.ವಿ.ಸದಾನಂದ ಗೌಡ

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಕಳ್ಳರ ಪಕ್ಷಗಳಾಗಿದ್ದು, ಇವುಗಳು ದರಿದ್ರ ಪಕ್ಷಗಳಾಗಿವೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಡಾ.ರಾಜ್‍ಕುಮಾರ್ ಸಮಾಧಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಖುದ್ದು ಪೌರಕಾರ್ಮಿಕರ ಜೊತೆಗೂಡಿ ಕಸಗುಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಿಲ್ಲ. ಅವರ ಆಂತರಿಕ ಕಚ್ಚಾಟದಿಂದಲೇ ಅವರಿಗೆ ಅಂತಹ ಪರಿಸ್ಥಿತಿ ಎದುರಾಗಿದೆ. ಶಾಸಕರಾದ ಶಿವರಾಮ್ ಹೆಬ್ಬಾರ್‍ರವರನ್ನು ಕೈಕಾಲು ಕಟ್ಟಿ ಕಿಡ್ನಾಪ್ ಮಾಡಿ ನಾವೇನು ಪಕ್ಷಕ್ಕೆ ಎಳೆದು ತಂದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ದರಿದ್ರ ಪಕ್ಷಗಳು ಹಾಗೂ ಕಳ್ಳರ ಪಾರ್ಟಿಗಳು ಎಂದು ತಿಳಿದು ಅವರೇ ಹೊರ ಬಂದಿರಬಹುದು ಎಂದು ವ್ಯಂಗ್ಯವಾಡಿದರು.

ಯಾವುದೇ ಶಾಸಕರು ಬಿಜೆಪಿ ಬಂದರೆ ನಾವು ಅವರನ್ನು ಸ್ವಾಗತಿಸುತ್ತೇವೆಯೋ ಹೊರತು, ಆಪರೇಷನ್ ಕಮಲ ಮಾಡುತ್ತಿಲ್ಲ. ನಮ್ಮದು ಏನೇ ಇದ್ದರೂ ಆಪರೇಷನ್ ಸ್ವಚ್ಛ್ ಭಾರತ್ ಅಷ್ಟೇ. ಅವರ ಸರ್ಕಾರ ಬಿದ್ದರೆ ಅತಿ ದೊಡ್ಡ ಪಕ್ಷವಾಗಿರುವ ನಾವು ಸರ್ಕಾರ ರಚಿಸುವುದು ಖಚಿತ. ನಾವು ಆಪರೇಷನ್ ಕಮಲ ಮಾಡುತ್ತಿದ್ದೇವೆ ಎಂದು ಆರೋಪ ಮಾಡುತ್ತಿರುವ ಅವರು ಸುಮ್ಮನೆ ಕುಳಿತಿಲ್ಲ. ನಮ್ಮ ಬಿಜೆಪಿ ಶಾಸಕರಿಗೂ ಸಹ ಆಮೀಷವೊಡ್ಡುತ್ತಿದ್ದಾರೆ. ಕಾಂಗ್ರೆಸ್ ಆಮೀಷವೊಡ್ಡಿರುವ ಶಾಸಕರನ್ನು ನಾನು ಕರೆದುಕೊಂಡು ಬಂದು ನಿಲ್ಲಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಏಕೆ ಬಿಜೆಪಿ ಶಾಸಕರ ಹಿಂದೆ ಬೀಳಬೇಕು? ಅವರಿಗೇನಾದರೂ ಭಯ ಇದೆಯೇ? ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಅನ್ನುವ ರೀತಿ ದೊಡ್ಡ ದೊಡ್ಡ ಕಳ್ಳರು ಬೇರೆಯವರನ್ನು ಕಳ್ಳ ಅಂತಾ ತೋರಿಸ್ತಾ ಇದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *