ರಾಯಚೂರು: ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ವಿಷ ಸೇವಿಸಿ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಎನ್‍ಇ ಕೆಎಸ್‌ಆರ್‌ಟಿಸಿ ಲಿಂಗಸೂರು ಡಿಪೋ ಬಸ್ ನಿರ್ವಾಹಕರೊಬ್ಬರು ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಲಿಂಗಸೂರು ಜಂಗಿರಾಂಪುರ ತಾಂಡಾ ಟೋಪಣ್ಣ ಆತ್ಮಹತ್ಯೆ ಮಾಡಿಕೊಂಡ ನಿರ್ವಾಹಕ. ಟೋಪಣ್ಣನ ಸಾವಿಗೆ ಮೇಲಾಧಿಕಾರಿಗಳಾದ ನಾಗರಾಜ್, ರಾಘವೇಂದ್ರ ಕಾರಣ ಅಂತ ಮೃತನ ಕುಟುಂಬದವರು ಡಿಪೋ ಮುಂದೆ ಶವವಿಟ್ಟು, ಬಸ್ಸುಗಳು ಹೊರಗೆ ಹೋಗದಂತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಿರುಕುಳ ಕೊಟ್ಟ ಮೇಲಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಕೆಲವರು ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಏನಿದು ಪ್ರಕರಣ?
ಸೆಪ್ಟಂಬರ್ 3 ರಂದು ಟೋಪಣ್ಣ ವಿಷ ಸೇವಿಸಿದ್ದರು. ತಕ್ಷಣವೇ ಅವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಟೋಪಣ್ಣ ಮೃತಪಟ್ಟಿದ್ದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಮೃತರ ಸಂಬಂಧಿಕರು ಡಿಪೋ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಮೃತ ಟೋಪಣ್ಣ ಅವರನ್ನು ಮೇಲಾಧಿಕಾರಿಗಳು ಲಿಂಗಸುಗೂರಿನಿಂದ ಸಿಂಧನೂರಿಗೆ ವರ್ಗಾವಣೆ ಮಾಡಿದ್ದರು. ಆದರೆ ಕೆಲಸ ನೀಡದೇ ಲಂಚಕೊಡುವಂತೆ ಪೀಡಿಸುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತನ ಕುಟುಂಬದ ಜೊತೆ ಮಾತುಕತೆ ನಡೆಸಿದ ಅಧಿಕಾರಿಗಳು, ಆಸ್ಪತ್ರೆಯ ಖರ್ಚು, ಕುಟುಂಬದ ಒಬ್ಬರಿಗೆ ಉದ್ಯೋಗ ಹಾಗೂ ಸ್ವಲ್ಪ ಮಟ್ಟದ ಪರಿಹಾರ ಧನವನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/JKTPSKrbGdk

Leave a Reply