ಬುರಾರಿ ಪ್ರಕರಣ: ಒಂದೇ ಕುಟುಂಬದ 11 ಜನರು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಅದೊಂದು ಆಕಸ್ಮಿಕ ಘಟನೆ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಬುರಾರಿ ಕುಟುಂಬದ 11 ಸದಸ್ಯರ ನಿಗೂಢ ಸಾವು ಆತ್ಮಹತ್ಯೆ ಅಲ್ಲ, ಆಚರಣೆ ವೇಳೆ ನಡೆದ ಆಕಸ್ಮಿಕ ಘಟನೆ ಎಂದು ಸಿಬಿಐ ನೀಡಿರುವ ವರದಿಯಲ್ಲಿ ಬಹಿರಂಗೊಂಡಿದೆ.

ಘಟನೆಯ ಕುರಿತು ಸತ್ಯಾಂಶ ತಿಳಿಯಲು ಸಿಬಿಐ ಸಹಾಯ ಕೋರಿದ್ದ ದೆಹಲಿ ಪೊಲೀಸರು ಕೇಂದ್ರ ತನಿಖಾ ದಳಕ್ಕೆ ಮಾಹಿತಿ ನೀಡಿದ್ದರು. ಸದ್ಯ ಬುಧವಾರ ಸಂಜೆ ತನಿಖಾ ವರದಿಯನ್ನು ದೆಹಲಿ ಪೊಲೀಸರು ಪಡೆದಿದ್ದಾರೆ.

ವರದಿಯಲ್ಲಿ ಸಾವಿನ ಹಿಂದಿನ ಕುರಿತ ನೈಜ ಕಾರಣವನ್ನು ಬಹಿರಂಗ ಪಡಿಸಲಾಗಿದ್ದು, ಸಾವಿಗೂ ಮುನ್ನ ಉದ್ದೇಶ ಪೂರ್ವಕವಾಗಿ ಕುಟುಂಬ ಯಾವ ಸದಸ್ಯರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿರಲಿಲ್ಲ. ಆದರೆ ಆಚರಣೆ ವೇಳೆ ನಡೆದ ಆಕಸ್ಮಿತ ಘಟನೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ಸಿಬಿಐನ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಸಿಎಫ್‍ಎಸ್‍ಎಲ್) ಮೃತರ ಮನೆಯಲ್ಲಿ ದೊರೆತ ಕೆಲ ದಾಖಲೆಗಳ ಕುರಿತು ತನಿಖೆ ನಡೆಸಿದೆ. ಅಲ್ಲದೇ ಮನೆಯ ನೆರೆಹೊರೆ ಕುಟುಂಬಗಳು, ಸ್ನೇಹಿತರು, ಆತ್ಮೀಯರನ್ನು ತನಿಖೆಗೆ ಒಳಪಡಿಸಿ ಸಾವಿಗೂ ಮುನ್ನ ಕುಟುಂಬ ಸದಸ್ಯರು ಇದ್ದ ಮನಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೇ ಘಟನೆಯಲ್ಲಿ ಸಾವನ್ನಪ್ಪಿದ್ದ ದಿನೇಶ್ ಸಿಂಗ್ ಚುಂದಾವತ್ ಹಿರಿಯ ಮಗ ಹಾಗೂ ಆಕೆಯ ಸಹೋದರಿ ಸುಜಾತ ನಾಗ್‍ಪಾಲ್ ಮತ್ತು ಇತರೇ ಕುಟುಂಬಸ್ಥರ ಆತ್ಮೀಯರನ್ನು ವಿಚಾರಣೆ ನಡೆಸಿತ್ತು.

ಏನಿದು ಸೈಕಲಾಜಿಕಲ್ ಮರಣೋತ್ತರ ಪರೀಕ್ಷೆ?
ಈ ಮರಣೋತ್ತರ ಪರೀಕ್ಷೆ ವಿಧಾನದಲ್ಲಿ ವ್ಯಕ್ತಿ ಸಾವಿಗೂ ಮುನ್ನ ಇದ್ದ ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಇದರಲ್ಲಿ ವ್ಯಕ್ತಿಯ ಸ್ನೇಹಿತರು, ಕುಟುಂಬ ಹಾಗೂ ಆರೋಗ್ಯ ಸ್ಥಿತಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಹಲವರನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಈ ಮಾಹಿತಿ ಅನ್ವಯ ಸಿಬಿಐ ವರದಿ ನೀಡುತ್ತದೆ.

ಏನಿದು ಪ್ರಕರಣ: ಜುಲೈ 1ರಂದು ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲಿ 11 ಕಿಟಕಿಗಳು, 11 ಪೈಪುಗಳು ಸಿಕ್ಕಿದ್ದು 11 ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆರಂಭಿಕ ತನಿಖೆ ವೇಳೆ ಮನೆಯಲ್ಲಿ ಸಿಕ್ಕ ಚೀಟಿಯ ಪ್ರಕಾರ ಮೃತ 11 ಮಂದಿಯು 10 ಕ್ರಮಗಳನ್ನು ಅನುಸರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿತ್ತು, ಅಲ್ಲದೇ ಇವರ ಮನೆಯಲ್ಲಿ ಬಾಗಿಲುಗಳು ಸಹ 11 ಕಬ್ಬಿಣದ ರಾಡ್‍ಗಳನ್ನು ಒಳಗೊಂಡಿದ್ದು ಹಲವು ನಿಗೂಢತೆಗೆ ಎಡೆಮಾಡಿಕೊಟ್ಟಿತ್ತು.

11 ಮಂದಿಯೂ ಆಧ್ಯಾತ್ಮದ ಮೊರೆ ಹೋಗಿ ಮೋಕ್ಷ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆಯೂ ವ್ಯಕ್ತವಾಗಿತ್ತು. ಈ ಆತ್ಮಹತ್ಯೆಗೆ ಪ್ರೇರೇಪಣೆ ನೀಡಲಾಗಿತ್ತು ಎಂದು ಕೂಡ ವರದಿಯಾಗಿತ್ತು.

ನೆರೆಮನೆಯವರು ನೀಡಿದ ಮಾಹಿತಿ ಅನ್ವಯ ಕುಟುಂಬವು ಆತ್ಮಹತ್ಯೆಗೂ ಮುಂಚೆ ಪ್ರಿಯಾಂಕ ಎಂಬವರ ಮದುವೆಗೆ ತಯಾರು ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *