ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ವಿರುದ್ಧ 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನ್ಯಾಯಾಲಯ ಬಂಧನದ ವಾರಂಟ್  ಜಾರಿ ಮಾಡಿದೆ.

ಮಹಾರಾಷ್ಟ್ರದ ನಾಂದೇಡ್ ನಲ್ಲಿರುವ ಧರ್ಮಬಾದ್ ಕೋರ್ಟ್ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಆಂಧ್ರಪ್ರದೇಶ ಕ್ಯಾಬಿನೆಟ್ ಮಿನಿಸ್ಟರ್ ಡಿ ಉಮಾಮಹೇಶ್ವರ್ ರಾವ್ ಹಾಗೂ 14 ಮಂದಿ ವಿರುದ್ಧ ವಾರಂಟ್ ಜಾರಿ ಮಾಡಿದೆ. ಅಲ್ಲದೇ ಸೆಪ್ಟೆಂಬರ್ 21ರ ಒಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ಅವಿಭಜಿತ ಆಂಧ್ರಪ್ರದೇಶ ಇದ್ದಾಗ 2010ರಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥರು ಆಗಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ಮಹಾರಾಷ್ಟ್ರದ ಬಾಬ್ಲಿ ಯೋಜನೆ ಕುರಿತು ಪ್ರತಿಭಟನೆ ನಡೆಸಿದ್ದರು. ಟಿಡಿಪಿ ತನ್ನ ಶಾಸಕರೊಂದಿಗೆ ಮಹಾರಾಷ್ಟ್ರದ ನಿಷೇಧಿತ ಪ್ರದೇಶವಾದ ಬಾಬ್ಲಿ ಯೋಜನೆ ಪ್ರದೇಶಕ್ಕೆ ಪ್ರತಿಭಟನಾ ಯಾತ್ರೆ ನಡೆಸಿತ್ತು. ಈ ವೇಳೆ ಗೋದಾವರಿ ನದಿಗೆ ಮಹಾರಾಷ್ಟ್ರ ಸರ್ಕಾರ ನಿರ್ಮಾಣ ಮಾಡುತ್ತಿರುವ ಬಾಬ್ಲಿ ಯೋಜನೆ ನಿಯಮಗಳ ವಿರುದ್ಧವಾಗಿದೆ ಎಂದು ಆರೋಪಿಸಿತ್ತು.

ಅಂದು ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧಿ ಪಕ್ಷದ ನಾಯಕತ್ವದ ಸ್ಥಾನ ಹೊಂದಿದ್ದರು. ಯಾತ್ರೆಯ ವೇಳೆ ಭಾಗವಹಿಸಿದ್ದ 40 ಶಾಸಕರು ಹಾಗೂ ಚಂದ್ರಬಾಬು ನಾಯ್ಡುರನ್ನು ಅಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಈ ಪ್ರಕರಣವನ್ನು ಮರುವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಸದ್ಯ ಕೋರ್ಟ್ ನೋಟಿಸ್ ಪಡೆದಿರುವ ಟಿಡಿಪಿ ಮುಖಂಡ ಬುದ್ಧ ವೆಂಕಣ್ಣ ಈ ಕುರಿತು ವಿಜಯವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಲ್ಲಿ ತಮಗೆ ಸಮನ್ಸ್ ಜಾರಿಯಾಗಲು ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *