ಕಿಂಗ್‍ಫಿಶರ್ ಏರ್‌ಲೈನ್ಸ್‌ನ ಭಾಗಶಃ ಮಾಲೀಕತ್ವವನ್ನು ಬೇನಾಮಿ ಹೆಸ್ರಲ್ಲಿ ರಾಗಾ ಕುಟುಂಬ ಹೊಂದಿತ್ತು: ಬಿಜೆಪಿ ವಕ್ತಾರ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್‍ಫಿಶರ್ ಏರ್‌ಲೈನ್ಸ್‌ ಸಂಸ್ಥೆಯ ಭಾಗಶಃ ಮಾಲೀಕತ್ವವನ್ನು ರಾಹುಲ್ ಗಾಂಧಿ ಕುಟುಂಬ ಬೇನಾಮಿಯಾಗಿ ಹೊಂದಿತ್ತೆಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯರೊಂದಿಗೆ ಕಳೆದ ಯುಪಿಎ ಸರ್ಕಾರ ಸಾಕಷ್ಟು ಸ್ವೀಟ್ ಡೀಲ್‍ಗಳನ್ನು ಮಾಡಿಕೊಂಡಿತ್ತು. ಅಲ್ಲದೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುಟುಂಬ ತಮ್ಮ ಪ್ರತಿನಿಧಿಗಳ ಮೂಲಕ ಕಿಂಗ್‍ಫಿಶರ್ ಏರ್‌ಲೈನ್ಸ್‌ನ ಭಾಗಶಃ ಮಾಲೀಕತ್ವವನ್ನು ಹೊಂದಿದ್ದರು. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆರ್‌ಬಿಐ ಕಿಂಗ್‍ಫಿಶರ್ ಏರ್‌ಲೈನ್ಸ್‌ಗಳೊಂದಿಗೆ ಹೇಗೆ ಸ್ವೀಟ್ ಡೀಲ್ ಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದ್ದಾರೆ.

ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲದಲ್ಲಿ ವಿಜಯ್ ಮಲ್ಯ ಜೊತೆ ಯುಪಿಎ ಸರ್ಕಾರ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಗಾಂಧಿ ಕುಟುಂಬದ ಪ್ರಭಾವದಿಂದಲೇ ಮಲ್ಯಗೆ ಅನುಕೂಲಕರವಾಗಿರುವ ವಾತಾವರಣ ಕಲ್ಪಿಸಿಕೊಟ್ಟಿದ್ದರು. ಮಲ್ಯ ಹಾಗೂ ಗಾಂಧಿ ಕುಟುಂಬ ಆಪ್ತರಾಗಿದ್ದರು ಎಂಬುದನ್ನು ಯಾರು ಮರೆತಿಲ್ಲ. ಅಲ್ಲದೇ ಗಾಂಧಿ ಕುಟುಂಬ ಮಲ್ಯ ಅವರ ಕಿಂಗ್‍ಫಿಶರ್ ವಿಮಾನಗಳ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದರು ಎನ್ನುವ ಮೂಲಕ ರಾಹುಲ್ ಗಾಂಧಿಯವರು ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಲ್ಯ, ಅರುಣ್ ಜೇಟ್ಲಿ ಭೇಟಿ ಮಾಡಿದ್ದನ್ನ ಕಾಂಗ್ರೆಸ್ ಎಂಪಿ ನೋಡಿದ್ದಾರೆ: ರಾಹುಲ್ ಗಾಂಧಿ

ಗಾಂಧಿ ಕುಟುಂಬ ಮಲ್ಯ ಹಾಗೂ ಕಿಂಗ್‍ಫಿಶರ್ ಏರ್‌ಲೈನ್ಸ್‌ ಸಂಸ್ಥೆಗೆ ಸಾಕಷ್ಟು ಸಹಾಯ ಮಾಡಿದೆ. ಅಲ್ಲದೇ ಇದಕ್ಕಾಗಿ ಅನೇಕ ಒಳ ಒಪ್ಪಂದಗಳನ್ನು ಸಹ ಮಾಡಿಕೊಂಡಿದ್ದವು. ಈ ವೇಳೆ ಏರ್‌ಲೈನ್ಸ್‌ಗಾಗಿ ಬ್ಯಾಂಕುಗಳಿಂದ ಪಡೆದುಕೊಂಡಿರುವ ಸಾಲದ ದಾಖಲೆಗಳನ್ನು ಬಹಿರಂಗಪಡಿಸಿ, ಕಿಂಗ್‍ಫಿಶರ್ ಏರ್‌ಲೈನ್ಸ್‌ ಗೆ ನೀಡಿರುವ ಸಾಲದ ಸಂಬಂಧ ಆರ್‌ಬಿಐ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಹಲವಾರು ಪತ್ರಗಳನ್ನು ಬರೆದಿದೆ. ಇವುಗಳ ಮೂಲಕ ಸೋನಿಯಾ ಗಾಂಧಿ ಯಾರ ಪರವಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಅವಧಿಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವಿಜಯ್ ಮಲ್ಯಗೆ ಸಾಲ ನೀಡಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದೇ ವೇಳೆ ಅರುಣ್ ಜೇಟ್ಲಿ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತಹ ವ್ಯಕ್ತಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ಅರ್ಹತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜೇಟ್ಲಿ ಭೇಟಿ ಆಗಿದ್ದೆ- ವಿವಾದಕ್ಕೆ ಗುರಿಯಾಯ್ತು ವಿಜಯ್ ಮಲ್ಯ ಹೇಳಿಕೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *