ರಾಯಚೂರು: ಆಸ್ಟ್ರೇಲಿಯಾ ಅಲ್ರೌಂಡರ್ ಕ್ರಿಕೆಟ್ ಆಟಗಾರ ಬ್ರೆಟ್ ಲೀ ರಾಯಚೂರಿನ ಬಾಲಕಿಗೆ ಹಣದ ಸಹಾಯ ಮಾಡಿ ಆಕೆಯ ಬಾಳಿಗೆ ಬೆಳಕು ನೀಡಿದ್ದಾರೆ.
ಸಾಕ್ಷಿ ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಬಾಲನಗೌಡ ಕವಿತಾ ದಂಪತಿಯ ಪುತ್ರಿಯಾಗಿದ್ದು, ಈಕೆಗೆ ಒಂದು ವರ್ಷದವಳಿದ್ದಾಗಲೇ ಕಿವಿ ಕೇಳಿಸಲ್ಲ ಹಾಗೂ ಮಾತು ಬರಲ್ಲ ಎನ್ನುವುದು ಪೋಷಕರಿಗೆ ಸ್ಪಷ್ಟವಾಗಿತ್ತು. ಆದರೆ ಏನಾದರೂ ಪ್ರಯತ್ನ ಮಾಡಿ ಮಗಳಿಗೆ ಮಾತು ಬರುವ ಹಾಗೇ ಮಾಡಬೇಕು ಅಂತ ಬಾಲನಗೌಡ ಇನ್ನಿಲ್ಲದ ಪ್ರಯತ್ನಗಳನ್ನ ಮಾಡಿದ್ದರು.

ಮೂರು ವರ್ಷಗಳ ಸತತ ಪ್ರಯತ್ನದಿಂದ ನಾಲ್ಕು ವರ್ಷದ ಸಾಕ್ಷಿ ಈಗ ಮಾತನಾಡುತ್ತಿದ್ದಾಳೆ. ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾಳೆ. ಸಾಕ್ಷಿಯ ಇಂದಿನ ಈ ಖುಷಿಗೆ ಆಸ್ಟ್ರೇಲಿಯನ್ ಕ್ರಿಕೆಟಿಗ ಬ್ರೆಟ್ ಲೀ ಕಾರಣವಾಗಿದ್ದಾರೆ. ಸಾಕ್ಷಿ ಚಿಕಿತ್ಸೆಗೆ ಬ್ರೆಟ್ ಲೀ 16 ಲಕ್ಷ ರೂ. ಸಹಾಯ ಮಾಡಿದ್ದಾರೆ.

ಮಗಳಿಗೆ ಮಾತು ಬರುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಬಾಲನಗೌಡ ಸಿಂಧನೂರು, ರಾಯಚೂರಿನ ಆಸ್ಪತ್ರೆಗಳಲ್ಲಿ ತೋರಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಅಲ್ಲಿ ಹಿಯರಿಂಗ್ ಏಡ್ ಅಳವಡಿಸಿದರಾದರೂ ಶೇಕಡಾ 85ರಷ್ಟು ಕಿವುಡುತನ ಹಾಗೇ ಉಳಿದಿತ್ತು.

ಕೊನೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ. ಯೋಜನೆಯಡಿ ಶಿಫಾರಸ್ಸು ಮಾಡಿದ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಿರುವ ಬ್ರೆಟ್ ಲೀ ಶಸ್ತ್ರ ಚಿಕಿತ್ಸೆಯ ಖರ್ಚನ್ನು ಸಂಪೂರ್ಣ ಭರಿಸಿ ಸಾಕ್ಷಿಗೆ ಮಾತು ಕೊಟ್ಟಿದ್ದಾರೆ. ಮೊದಲೆಲ್ಲಾ ಕೇವಲ ಕೈಸನ್ನೆ ಮಾಡುತ್ತಿದ್ದ ಸಾಕ್ಷಿ ಈಗ ಹರಳು ಹುರಿದಂತೆ ಮಾತನಾಡುತ್ತಿದ್ದಾಳೆ.

ಕಳೆದ ವರ್ಷವೇ ಶಸ್ತ್ರ ಚಿಕಿತ್ಸೆಯಾಗಿದ್ದು ಸಾಕ್ಷಿಗೆ ಮೆದುಳಿನಲ್ಲೊಂದು ಯಂತ್ರವನ್ನು ಅಳವಡಿಸಲಾಗಿದೆ. ಹೊರಗಡೆ ಒಂದು ಯಂತ್ರ ಜೋಡಿಸಲಾಗಿದೆ. ಇತ್ತೀಚೆಗೆ ಸಾಕ್ಷಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬ್ರೆಟ್ ಲೀ ಅವಳ ಮಾತುಗಳನ್ನು ಕೇಳಿ ಖುಷಿ ವ್ಯಕ್ತಪಡಿಸಿದ್ದಾರೆ. ಮಗಳ ಸ್ಥಿತಿ ಕಂಡು ಮರಗುತ್ತಿದ್ದ ಪೋಷಕರು ಈಗ ಖುಷಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply