ಮೋದಿಯನ್ನು ಟೀಕಿಸುತ್ತಿದ್ದ ಶಿವಸೇನೆ ಬಂದ್‍ಗೆ ಬೆಂಬಲ ಸೂಚಿಸಿ, ತಟಸ್ಥವಾಯ್ತು!

ಮುಂಬೈ: ತೈಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಬೆಂಬಲ ಸೂಚಿಸಿದ್ದ ಶಿವಸೇನೆಯು ಸೋಮವಾರದ ಬಂದ್‍ನಲ್ಲಿ ತಟಸ್ಥ ಧೋರಣೆಯನ್ನು ಅನುಸರಿಸಿದೆ.

ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿದ್ದ ಶಿವಸೇನೆ ಇದೀಗ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ತಟಸ್ಥ ನಿಲುವು ತಳೆದಿರುವುದು ಕೂತುಹಲ ಕೆರಳಿಸಿದೆ. ಶಿವಸೇನೆಯ ಆಪ್ತ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಬಂದ್ ಗೆ ಬೆಂಬಲ ನೀಡಿದ್ದರೂ ಸಹ ಶಿವಸೇನೆ ಮಾತ್ರ ಬಂದ್ ನಿಂದ ದೂರ ಉಳಿದಿದೆ.

ಬಂದ್‍ಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್ ನೀಡಿದ್ದ ಮನವಿಯನ್ನು ಸ್ವೀಕರಿಸಿದ್ದಲ್ಲದೇ, ಬಂದ್‍ಗೆ ಸಂಪೂರ್ಣ ಬೆಂಬಲವಿದೆಯಂದು ಭಾನುವಾರ ಘೋಷಿಸಿತ್ತು. ಆದರೆ ಸೋಮವಾರ ನಡೆದ ಬಂದ್‍ನಲ್ಲಿ ತಟಸ್ಥ ಧೋರಣೆಯನ್ನು ಅನುಸರಿಸುವ ಮೂಲಕ ಬಂದ್‍ನಿಂದ ಹಿಂದೆ ಸರಿದಿದೆ. ಮಾಹಿತಿಗಳ ಪ್ರಕಾರ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ತೈಲ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಶಿವಸೇನೆ ಹಿಂದೆ ಸರಿದಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೇನಾ ವಕ್ತಾರ ಹಾಗೂ ಸಂಸದ ಸಂಜಯ್ ರಾವತ್‍ರವರು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸುವುದಕ್ಕೆ ಶಿವಸೇನೆಯ ಸಂಪೂರ್ಣ ಬೆಂಬಲವಿದೆ. ಜಿಎಸ್‍ಟಿಗೆ ಸೇರಿಸುವವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಟ್ ದರವನ್ನು ಕಡಿತಗೊಳಿಸಿ ಸಾರ್ವಜನಿಕರ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಾದ್ಯಂತ ಬಂದ್ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *