ಬಸ್ ಬಂದ್ ಮಾಡಿಲ್ಲಾಂದ್ರೆ ಗಾಜು ಪುಡಿ ಮಾಡ್ತೇವೆ- ಕಾಂಗ್ರೆಸ್ ಕಾರ್ಯಕರ್ತರ ಎಚ್ಚರಿಕೆ

ಉಡುಪಿ: ಬಸ್ ಬಂದ್ ಮಾಡಿಲ್ಲಾಂದ್ರೆ ಗಾಜು ಪುಡಿ ಮಾಡ್ತೇವೆ. ಅಂಗಡಿ ಬಂದ್ ಮಾಡಿಲ್ಲಾಂದ್ರೆ ಆಗೋ ಅನಾಹುತಕ್ಕೆ ನಾವು ಕಾರಣ ಅಲ್ಲ. ಹೀಗಂತ ಧಮ್ಕಿ ಹಾಕುತ್ತಾ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯದ ಬಂದ್ ಮಾಡಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡಿ ಓಪನ್ ಇದ್ದ ಅಂಗಡಿಗಳಿಗೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ವಸ್ತುಗಳನ್ನೆಲ್ಲಾ ಒಳಗೆ ತುಂಬಿ ಬಾಗಿಲು ಹಾಕಿದ್ದಾರೆ. ಕೆಎಸ್ ಆರ್ ಟಿ ಸಿ ಬಸ್ ತಡೆದು, ಬಸ್ ಮುಂದೆ ಬಿಟ್ರೆ ಗಾಜು ಪುಡಿ ಮಾಡೋದಾಗಿ ಎಚ್ಚರಿಕೆ ನೀಡಿದರು. ಹೋಟೆಲ್, ಅಂಗಡಿಗಳಿಗೆ ತೆರಳಿ ಶಟರ್ ಎಳೆದು ಅಂಗಡಿ ಮುಚ್ಚಿಸಿದರು.

ಬಸ್ ನಿಲ್ದಾಣದಲ್ಲಿ ಮೆರವಣಿಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ದಿನಪೂರ್ತಿ ಬಂದ್ ಮಾಡಿಲ್ಲಂದ್ರೆ ಪರಿಸ್ಥಿತಿ ಸರಿ ಇರಲ್ಲ ಅಂತ ತಾಕೀತು ಮಾಡಿದರು. ಹೂವಿನಂಗಡಿ, ತರಕಾರಿ ಮಾರುಕಟ್ಟೆಗಳಿಗೆ ತೆರಳಿ ಬಂದ್ ಮಾಡಿಸಿದ್ದಾರೆ. ಈ ಸಂದರ್ಭ ಪೊಲೀಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿಯಾಗಿದೆ. ಬಲವಂತವಾಗಿ ಬಂದ್ ಮಾಡಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರಿಂದ ತಡೆದಿದ್ದಾರೆ. ಪೊಲೀಸರು ಮತ್ತು ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ನಡೆದಿದೆ.

ಪೊಲೀಸರು ಎಚ್ಚರಿಕೆ:
ಬಲವಂತದ ಬಂದ್ ಮಾಡಿದ್ರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ರು. ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಡುಪಿ ನಗರ ಠಾಣೆ ಎಸ್ ಐ ಅನಂತ ಪದ್ಮನಾಭ ತಾಕೀತು ಮಾಡಿದರು. ಪೊಲೀಸರ ಮಧ್ಯಪ್ರವೇಶದ ನಂತರ ಪ್ರತಿಭಟನಾಕಾರರ ಗುಂಪು ಚದುರಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *