ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಭಾರತ್ ಬಂದ್- ಏನಿರುತ್ತೆ..? ಏನಿರಲ್ಲ..?

ಬೆಂಗಳೂರು: 2014ರ ಚುನಾವಣೆ ಪ್ರಚಾರದಲ್ಲಿ ಮೋದಿ ನೇತೃತ್ವದ ಬಿಜೆಪಿ ಜಪಿಸಿದ್ದು ಅಚ್ಚೇ ದಿನ್ ಮಂತ್ರ. ಆದ್ರೆ ಅಧಿಕಾರಕ್ಕೆ ಬಂದ ನಂತ್ರ ಪ್ರಧಾನಿ ಮೊದಿ ಅದನ್ನು ಮರೆತೆ ಬಿಟ್ಟಂತೆ ಕಾಣುತ್ತಿದೆ. ಯುಪಿಎ ಅವಧಿಗಿಂತ ದೇಶದಲ್ಲಿ ದಿನಗಳು ದುಬಾರಿಯಾಗುತ್ತಿದೆ. ಅದ್ರಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಂತೂ ಯಾರ ಹಿಡಿತಕ್ಕೂ ಸಿಗದ ರೀತಿಯಲ್ಲಿ ಗಗನಮುಖಿಯಾಗಿದೆ.

ಇದೀಗ ಮತ್ತೆ ಲೋಕಸಭೆ ಚುನಾವಣೆ ಬರುತ್ತಿದೆ. ಅದಕ್ಕೆ ಸಿದ್ಧವಾಗುತ್ತಿರೋ ವಿಪಕ್ಷ ಕಾಂಗ್ರೆಸ್ ಇದೀಗ ತೈಲ ಬೆಲೆ ಅಸ್ತ್ರವನ್ನು ಪ್ರಯೋಗಿಸಿದೆ. ಸೋಮವಾರ ಭಾರತ್ ಬಂದ್‍ಗೆ ಕರೆ ನೀಡಿದೆ. ಸೋಮವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಂದ್ ನಡೆಯಲಿದೆ. ಭಾರತ್ ಬಂದ್‍ಗೆ ಕರೆ ನೀಡುವ ಮೂಲಕ ಬಿಜೆಪಿ ವಿರೋಧಿ ಮಹಾ ಮೈತ್ರಿಕೂಟಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ.

ಬಂದ್ ಬೆಂಬಲಿಸಿದ ಪಕ್ಷಗಳು:
* ಜೆಡಿಎಸ್, ಎಸ್‍ಪಿ, ಬಿಎಸ್‍ಪಿ, ಆರ್‍ಜೆಡಿ
* ಡಿಎಂಕೆ,ಸಿಪಿಎಂ, ಸಿಪಿಐ, ಎಸ್‍ಯುಸಿಐ
* ಎನ್‍ಸಿಪಿ, ಜನಸೇನಾ, ಶಿವಸೇನೆ, ಎಂಎನ್‍ಎಸ್
* ಟಿಎಂಸಿಯಿಂದ ಬಂದ್‍ಗೆ ಬೆಂಬಲ ಇಲ್ಲ. (ಪ್ರತಿಭಟನೆ ಮಾತ್ರ)

ಬಿಜೆಪಿ ಆಡಳಿತ ರಾಜ್ಯಗಳನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ಕೂಡ ಭಾರತ್ ಬಂದ್ ಉಗ್ರ ಸ್ವರೂಪ ತಳೆಯುವ ಸಾಧ್ಯತೆ ಇದೆ. ಅದರಲ್ಲೂ ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಬಹಿರಂಗವಾಗಿ ಬಂದ್‍ಗೆ ಬೆಂಬಲ ಘೋಷಿಸಿದೆ. ಕನ್ನಡಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ರಾಜ್ಯದಲ್ಲಿ ಉತ್ತರ ಕನ್ನಡ, ಹಾವೇರಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಬಂದ್ ಜೋರಾಗೋ ಸಾಧ್ಯತೆ ಇದೆ.

ಯಾವುದೆಲ್ಲಾ ಇರಲ್ಲ?
* ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್, ಖಾಸಗಿ ಬಸ್ ಸೇವೆ..!
* ಆಟೋ, ಓಲಾ-ಊಬರ್, ಖಾಸಗಿ ಶಾಲೆಗಳ ವಾಹನಗಳು, ಐಟಿ-ಬಿಟಿ ವಾಹನ
* ಸರ್ಕಾರಿ ಶಾಲಾ ಕಾಲೇಜು, ಖಾಸಗಿ ಶಾಲಾ ಕಾಲೇಜುಗಳು..!
* ಸರ್ಕಾರಿ ಕಚೇರಿ, ಬ್ಯಾಂಕುಗಳು, ಗಾರ್ಮೆಂಟ್ಸ್ ?
* ಥಿಯೇಟರ್, ಶಾಪಿಂಗ್ ಮಾಲ್
* ಬೀದಿ ಬದಿ ವ್ಯಾಪಾರ, ಅಂಗಡಿಗಳು, ಹೋಟೆಲ್..?

ಭಾರತ್ ಬಂದ್‍ಗೆ ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ನಾಲ್ಕು ಸಾರಿಗೆ ನಿಗಮಗಳ ನೌಕರರು ಬಂದ್‍ಬೆ ಬೆಂಬಲ ಸೂಚಿಸಿರೋ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು ಸೇರಿ ರಾಜ್ಯದಲ್ಲಿ ಎಲ್ಲಿಯೂ ಬಸ್‍ಗಳು ರಸ್ತೆಗೆ ಇಳಿಯಲ್ಲ. ದಕ್ಷಿಣ ಕನ್ನಡ, ಮಡಿಕೇರಿ ಸೇರಿ ಹಲವೆಡೆ ಖಾಸಗಿ ಬಸ್‍ಗಳ ಮಾಲೀಕರ ಸಂಘವೂ ಬಂದ್‍ಗೆ ಬೆಂಬಲ ಸೂಚಿಸಿದೆ. ಆಟೋ, ಓಲಾ-ಊಬರ್, ಖಾಸಗಿ ಶಾಲೆಗಳ ವಾಹನಗಳು, ಐಟಿ-ಬಿಟಿ ವಾಹನಗಳ ಸಂಸಘಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಕೆಲ ಆಟೋ ಸಂಘಟನೆಗಳು ಮಾತ್ರ ಬಂದ್‍ಗೆ ಬೆಂಬಲ ನೀಡಿಲ್ಲ. ಸರ್ಕಾರಿ ಶಾಲಾ ಕಾಲೇಜು, ಖಾಸಗಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಬ್ಯಾಂಕುಗಳು, ಗಾರ್ಮೆಂಟ್ಸ್ ಗಳು ನಾಳೆಯ ಪರಿಸ್ಥಿತಿ ನೋಡಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಿವೆ. ಥಿಯೇಟರ್‍ಗಳು, ಶಾಪಿಂಗ್ ಮಾಲ್‍ಗಳು ಬಂದ್ ಆಗಲಿವೆ. ಬೀದಿಬದಿ ವ್ಯಾಪಾರಿಗಳ ಸಂಘಟನೆ ಬಂದ್‍ಗೆ ಬೆಂಬಲ ಸೂಚಿಸಿವೆ. ಅಂಗಡಿ ಹೋಟೆಲ್‍ಗಳು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಿವೆ.

ಯಾವೆಲ್ಲ್ಲಾ ಸೇವೆ ಲಭ್ಯ?
* ಔಷಧಿಗಳು, ಆಸ್ಪತ್ರೆ, ಆಂಬ್ಯುಲೆನ್ಸ್
* ತರಕಾರಿ, ಹಾಲು ಸರಬರಾಜು, ಪತ್ರಿಕೆ
* ಮೆಟ್ರೋ ಸಂಚಾರ ಸೇವೆಗಳು

ತುರ್ತು ಅಗತ್ಯಗಳಾದ ಔಷಧಿಗಳು, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆಗಳು, ತರಕಾರಿ, ಹಾಲು ಸರಬರಾಜು, ಪತ್ರಿಕೆ, ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೌರಿಂಗ್, ಕೆಸಿ ಜನರೆಲ್ ಆಸ್ಪತ್ರೆಗಳೂ ಒಪನ್ ಇರಲಿವೆ.

ಇತ್ತ ಭಾರತ್ ಬಂದ್‍ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಇದು ರಾಜಕೀಯ ಪ್ರೇರಿತ ಬಂದ್. ನಿರ್ಲಕ್ಷ್ಯ ಮಾಡಿ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ರಾಜದೆಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕರೆ ನೀಡಿರೋ ಭಾರತ್ ಬಂದ್ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *