ಮದ್ವೆಯಾಗಿ 8 ವರ್ಷಗಳ ಬಳಿಕ ಹೆಂಡತಿಗೆ ವಂಚನೆ

ಚಿತ್ರದುರ್ಗ: ಆರೋಗ್ಯ ನಿರೀಕ್ಷಕನೊಬ್ಬ ಗರ್ಭಿಣಿಯಾಗಿರುವ ಹೆಂಡತಿಗೆ ಕೈಕೊಟ್ಟು ಮತ್ತೊಬ್ಬಳನ್ನ ಮದುವೆಯಾಗಿದ್ದಾನೆ ಎಂದು ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಹೆಲ್ತ್ ಇನ್ಸ್ ಪೆಕ್ಟರ್ ಹನುಮಂತರಾಯ ಪತ್ನಿಗೆ ಮೋಸ ಮಾಡಿದ ಪತಿ. ಹಿರಿಯೂರು ತಾಲೂಕಿನ ಮೇಟಿಕುರ್ಕೆ ಗ್ರಾಮದ ಪುಟ್ಟಮ್ಮ ಅಲಿಯಾಸ್ ಸುಲೋಚನಾ ಸುಮಾರು 9 ವರ್ಷಗಳ ಹಿಂದೆ ತನ್ನ ಸಂಬಂಧಿಯಾದ ಹನುಮಂತರಾಯಪ್ಪನನ್ನ ಮದುವೆಯಾಗಿದ್ದರು. ವೃತ್ತಿಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆದ ಹನುಮಂತರಾಯ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದನು. ಇದೀಗ ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾನೆ.

ಮದುವೆಯಾಗಿ ಎಂಟು ವರ್ಷಗಳ ಬಳಿಕ ನಾನು ಗರ್ಭಿಣಿಯಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನನ್ನನ್ನು ತವರಿಗೆ ಕಳುಹಿಸಿದ ಬಳಿಕ ನನ್ನೊಂದಿಗೆ ಒಡನಾಟ ಕಡಿಮೆ ಮಾಡಿಕೊಂಡಿದ್ದನು. ಈಗ ಬೇರೊಬ್ಬಳನ್ನ ಮದುವೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನನ್ನನ್ನ ಏನು ಮಾಡೋಕಾಗಲ್ಲ. ದುಡ್ಡೆಷ್ಟು ಬೇಕು ಹೇಳು ಬಿಸಾಕುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ ಎಂದು ಪುಟ್ಟಮ್ಮ ಹೇಳಿದ್ದಾರೆ.

ತನ್ನ ಗಂಡನ ಆಸೆಯಂತೆ ಒಂದೇ ಊರಿನಲ್ಲಿರುವ ಅವರ ತಂಗಿ ಮಗನಿಗೆ ನನ್ನ ಮಗಳನ್ನ ಕೊಟ್ಟು ಮದುವೆ ಮಾಡಿದೆ. ಮಗಳು ಚೆನ್ನಾಗಿರುತ್ತಾಳೆ ಎಂದುಕೊಂಡಿದ್ದೆ. ಆದರೆ ಸೋದರ ಸಂಬಂಧಿಗಳಾದ ಅತ್ತೆ ಮಾವ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಆದರು ನನ್ನ ಮಗಳ ಸಂಸಾರ ಸರಿ ಹೋಗಲಿ ಎಂದು ಅವರು ಕೇಳಿದ್ದಕ್ಕೆಲ್ಲಾ ಒಪ್ಪಿಕೊಂಡಿದ್ದೇವೆ. ನನ್ನ ಅಳಿಯ ತುಂಬು ಗರ್ಭಿಣಿಯಾದ ನನ್ನ ಮಗಳಿಗೆ ವಂಚಿಸಿ ಮತ್ತೊಬ್ಬಳನ್ನ ಮದುವೆಯಾಗಿದ್ದಾನೆ. ನಮ್ಮ ಬೆಂಬಲಕ್ಕೆ ಯಾರು ಇಲ್ಲ, ದಯಮಾಡಿ ನಮಗೆ ನ್ಯಾಯ ಸಿಗುವಂತೆ ಮಾಡಿ ಅಂತ ಸಂತ್ರಸ್ತೆಯ ತಾಯಿ ಕಣ್ಣೀರು ಹಾಕಿಕೊಂಡು  ಕೇಳಿಕೊಂಡಿದ್ದಾರೆ.

ಸೋದರ ಮಾವನನ್ನು ಮದುವೆಯಾದ ಅಮಾಯಕಿ ಈಗ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಮತ್ತೊಬ್ಬಳನ್ನ ಮದುವೆಯಾಗಿರುವ ಗಂಡ ಹೊಸ ಹೆಂಡತಿ ಜೊತೆ ನಾಪತ್ತೆಯಾಗಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *