ಲಿವರ್ ವೈಫಲ್ಯ, ಹೊಟ್ಟೆಯಲ್ಲಿತ್ತು ಲೀಟರ್ ಗಟ್ಟಲೆ ರಕ್ತ – ಶಿರೂರು ಶ್ರೀಗಳ ಸಾವಿನ ಸಂಬಂಧ ವಿಧಿವಿಜ್ಞಾನ ವರದಿ

ಉಡುಪಿ: ಇಲ್ಲಿನ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಷಪ್ರಾಶನದಿಂದ ಸಾವನ್ನಪ್ಪಿಲ್ಲ. ಅವರು ಲಿವರ್ ವೈಫಲ್ಯದಿಂದ ಮೃತಪಟ್ಟಿದ್ದಾರೆ ಅಂತ ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ವರದಿಯಾಗಿದೆ.

ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಕೆಎಂಸಿ ಜಂಟಿಯಾಗಿ ನೀಡಿದ ವರದಿಯಲ್ಲಿ ಈ ಅಂಶ ಸಾಬೀತಾಗಿದೆ. ಕೆಎಂಸಿ ವೈದ್ಯರಿಂದ ಪೊಲೀಸ್ ಇಲಾಖೆಗೆ ಎಫ್‍ಎಸ್ ಎಲ್ ವರದಿ ಹಸ್ತಾಂತರವಾಗಿದೆ. ಲಿವರ್ ವೈಫಲ್ಯ, ಅನ್ನನಾಳದಲ್ಲಾದ ರಂಧ್ರಗಳು, ಹೊಟ್ಟೆಯಲ್ಲಿ ತೀವ್ರ ರಕ್ತಸ್ರಾವದಿಂದಾಗಿ ಸಾವು ಸಂಭವಿಸಿದೆ ಎಂದು ಎಫ್ ಎಸ್ ಎಲ್ ವರದಿಯಲ್ಲಿ ತಿಳಿಸಿದೆ.

ಸ್ವಾಮೀಜಿಯ ಅನ್ನನಾಳದಲ್ಲಿ ಹಲವು ರಂಧ್ರಗಳಾಗಿದ್ದವು. ಎರಡೂ ಕಿಡ್ನಿಗಳು ವೈಫಲ್ಯವಾಗಿತ್ತು. ಹೊಟ್ಟೆಗೆ ನಾಲ್ಕೈದು ಲೀಟರ್ ರಕ್ತ ಸೇರಿಕೊಂಡಿತ್ತಂತೆ. ಇದನ್ನೇ ವೈದ್ಯರು ವಿಷಕಾರಿ ಅಂಶವೆಂದು ಹೇಳಿರಬಹುದು ಎಂದು ಶಂಕಿಸಲಾಗಿದೆ. ಆಗಸ್ಟ್ 21 ರಂದು ಪೊಲೀಸರಿಗೆ ಎಫ್‍ಎಸ್‍ಎಲ್ ವರದಿ ಸಿಕ್ಕಿತ್ತು.

ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ತಯಾರಿಸಿದ್ದ ವರದಿ ಮೇಲೆ ಪೊಲೀಸರು ಎರಡು ಬಾರಿ 10ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದರು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರ ಎಸ್ ಪಿ ಮರಣೋತ್ತರ ಪರೀಕ್ಷಾ ವರದಿಯನ್ನು ಕುಂದಾಪುರ ಎಸಿಗೆ ಹಸ್ತಾಂತರಿಸಿದ್ದಾರೆ. ಅಸಹಜ ಸಾವಿನ ಎಲ್ಲಾ ಕಡತಗಳು ಸಹಾಯಕ ಆಯುಕ್ತರ ಬಳಿ ಇದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಎಸ್ ಪಿ ಲಕ್ಷ್ಮಣ ನಿಂಬರ್ಗಿ ಮತ್ತು ಕೆಎಂಸಿ ಮಣಿಪಾಲ ವೈದ್ಯರು ನಿರಾಕರಿಸಿದ್ದಾರೆ.

ಶಿರೂರು ಶ್ರೀ ಸಾವಿಗೆ ಕಾರಣವೇನು?:
ವಿಷಪ್ರಾಶನದಿಂದ ಶಿರೂರು ಸ್ವಾಮೀಜಿ ಸತ್ತಿಲ್ಲ ಅಂತ ಎಫ್ ಎಸ್ ಎಲ್ ವರದಿಯಲ್ಲಿ ಉಲ್ಲೇಖವಾಗಿದೆ. ಕ್ರೋನಿಕ್ ಲಿವರ್ ಸಿರಾಸಿಸ್ ನಿಂದ ಶಿರೂರು ಶ್ರೀ ಸಾವು ಎಂಬೂದು ವರದಿಯ ಪ್ರಮುಖ ಅಂಶ. ಸ್ವಾಮೀಜಿಗೆ ಬಹು ಅಂಗಾಂಗ ವೈಫಲ್ಯವಾಗಿತ್ತು. ಇದರಿಂದಾಗಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

ಸ್ವಾಮೀಜಿಯ ಎರಡು ಕಿಡ್ನಿಗಳು ತನ್ನ ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ. ಗಂಟಲಿನಿಂದ ಹೊಟ್ಟೆ ತನಕ ಸ್ವಾಮೀಜಿ ಅನ್ನನಾಳದಲ್ಲಿ ಐದಾರು ಕಡೆ ತೂತು ಬಿದ್ದಿತ್ತು. ರಕ್ತನಾಳ ಸಿಡಿದು ನೇರವಾಗಿ ಹೊಟ್ಟೆಗೆ ರಕ್ತ ಸೇರಿಕೊಂಡಿದ್ದರಿಂದ ರಕ್ತ ವಾಂತಿ ಆಗಿತ್ತು. ಸ್ವಾಮೀಜಿ ತಿಂದ ಅನ್ನಾಹಾರ, ಪಾನೀಯ ಅನ್ನನಾಳದ ಮೂಲಕ ಹೊಟ್ಟೆಗೆ ಹೋಗುತ್ತಿರಲಿಲ್ಲ.

ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದ ಶಿರೂರು ಸ್ವಾಮೀಜಿ, ರಕ್ತ ವಾಂತಿ, ರಕ್ತ ಭೇದಿಯಿಂದ ಜುಲೈ 17ಕ್ಕೆ ಸ್ವಾಮೀಜಿ ಕೆಎಂಸಿ ಆಸ್ಪತ್ರೆ ಸೇರಿದ್ದರು. ಮದ್ಯ ವ್ಯಸನ, ಡ್ರಗ್ಸ್ ಸೇವನೆ, ನಿರಾಹಾರದಿಂದ ಕಿಡ್ನಿ ಫೈಲ್ ಸಾಧ್ಯತೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಸ್ವಾಮೀಜಿಯ ಸಾವು ಆಗಿದೆ ಅಂತ ವರದಿಯಲ್ಲಿ ಉಲ್ಲೇಖವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *