ಸೇ ನೋ ಡ್ರಗ್ಸ್ ಅಂದ್ರು ರಶ್ಮಿಕಾ ಮಂದಣ್ಣ!

ಕನ್ನಡ ಮತ್ತು ತೆಲುಗಿನಲ್ಲಿ ಎಂಥವರೂ ಅಚ್ಚರಿ ಪಡುವಂತೆ ಬ್ಯುಸಿಯಾಗಿರುವವರು ರಶ್ಮಿಕಾ ಮಂದಣ್ಣ. ಅತ್ತ ತೆಲುಗಿನಲ್ಲಿ ನಟಿಸಿರೋ ಗೀತಗೋವಿಂದಂ ಚಿತ್ರ ಸೂಪರ್ ಹಿಟ್ಟಾಗಿದೆ. ಇತ್ತ ಯಜಮಾನ ಚಿತ್ರ ರಿಲೀಸಾಗೋ ಹಂತದಲ್ಲಿದೆ. ಇದರ ಜೊತೆಗೆ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳಿಂದಲೂ ಗಮನ ಸೆಳೆದಿದ್ದಾರೆ.

ಇತ್ತೀಚೆಗಷ್ಟೇ ಪ್ರಾಕೃತಿಕ ವಿಕೋಪದಿಂದ ತಲ್ಲಣಿಸಿದ್ದ ಕೊಡಗಿನ ಜನತೆಗೆ ಸಹಾಯಹಸ್ತ ಚಾಚುವ ಮೂಲಕ ರಶ್ಮಿಕಾ ಗಮನ ಸೆಳೆದಿದ್ದರು. ಇದೀಗ ರಶ್ಮಿಕಾ ಡ್ರಗ್ಸ್ ತೆಕ್ಕೆಯಿಂದ ಯುವ ಸಮೂಹವನ್ನು ಪಾರು ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಸೇ ನೋ ಡ್ರಗ್ಸ್ ಎಂಬ ಅಭಿಯಾನದಲ್ಲಿ ಮಾತನಾಡಿರುವ ರಶ್ಮಿಕಾ ಡ್ರಗ್ಸ್ ನಂಥಾ ಮಾಯೆಯಿಂದ ಯುವ ಸಮೂಹವನ್ನು ದೂರವಿರುವಂತೆ ಮಾಡುವ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಶ್ಮಿಕಾ ತಮ್ಮ ಕಾಲೇಜು ದಿನಗಳ ಘಟನಾವಳಿಗಳ ಮೂಲಕವೇ ಯುವ ಸಮುದಾಯದೊಂದಿಗೆ ಸಂವಹನ ನಡೆಸಿದ್ದಾರೆ. ರಶ್ಮಿಕಾ ಕೊಡಗಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಓದಲು ಬಂದಾಗಲೇ ಡ್ರಗ್ಸ್ ಮಾಯೆಯ ಪರಿಚಯವಾಗಲಾರಂಭಿಸಿತ್ತಂತೆ. ಅದರ ಜೊತೆಗಾರರೇ ಡ್ರಗ್ಸ್ ಬಗ್ಗೆ ಅತೀವ ಕುತೂಹಲ ಹೊಂದಿದ್ದರಂತೆ. ಕೆಲ ಮಂದಿ ಅದನ್ನು ಬಳಸಿ ಆ ಬಗೆಗಿನ ಸಾಹಸಗಾಥೆಗಳನ್ನೂ ಹೇಳುತ್ತಿದ್ದರಂತೆ. ಆದರೆ ಹಾಗೊಂದು ಕ್ಯೂರಿಯಾಸಿಟಿಯೊಂದಿಗೆ ಡ್ರಗ್ಸ್ ತೆಕ್ಕೆಗೆ ಬಿದ್ದವರ ಬದುಕಿನಲ್ಲಿ ಎಂಥೆಥಾದ್ದೋ ದುರಂತಗಳು ನಡೆದಿದ್ದವಂತೆ.

ಯಾವುದೋ ಸಂಕಟ, ಒತ್ತಡಗಳಿಂದ ಪಾರಾಗಲು ಡ್ರಗ್ಸ್ ಮೊರೆ ಹೋದರೆ ಯಾವತ್ತೂ ಅದರಿಂದ ಪಾರಾಗಲು ಸಾಧ್ಯವಿಲ್ಲ. ಆದ್ದರಿಂದ ಯುವ ಸಮುದಾಯ ಓದು ಗುರಿಯತ್ತ ದೃಷ್ಟಿ ನೆಟ್ಟು, ಏನೇ ಬಂದರೂ ಪಾಸಿಟಿವ್ ಆಗಿ ತೆಗೆದುಕೊಂಡು ಭವಿಷ್ಯವನ್ನು ಬೆಳಗಿಸಿಕೊಳ್ಳುವಂತೆ ರಶ್ಮಿಕಾ ಕರೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *