ಬೆಂಗಳೂರು: ಎರಡು ವರ್ಷಗಳಿಗೂ ಹೆಚ್ಚು ಕಾಲ ತಮ್ಮನ್ನು ತಾವು ಕೆಜಿಎಫ್ ಚಿತ್ರಕ್ಕೆ ಸಮರ್ಪಿಸಿಕೊಂಡಿದ್ದವರು ರಾಕಿಂಗ್ ಸ್ಟಾರ್ ಯಶ್. ಅದಕ್ಕೆಂದೇ ಬೆಳೆಸಿಕೊಂಡಿದ್ದ ನೀಳವಾದ ಕೇಶರಾಶಿಯನ್ನು ಟ್ರಿಮ್ಮು ಮಾಡಿಕೊಂಡು ಹಳೇ ಲುಕ್ಕಿಗೆ ಮರಳಿರೋ ಯಶ್ ತಕ್ಷಣವೇ ಮೈ ನೇಮ್ ಈಸ್ ಕಿರಾತಕ ಚಿತ್ರದ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ.
ಕೆಜಿಎಫ್ ಚಿತ್ರ ಆರಂಭವಾಗಿ ಅಖಂಡ ಎರಡು ವರ್ಷಗಳವರೆಗೂ ಯಶ್ ಬೇರ್ಯಾವುದರತ್ತಲೂ ಹೊರಳಿಯೂ ನೋಡಿರಲಿಲ್ಲ. ದಿನೇ ದಿನೇ ಕುತೂಹಲ ಹುಟ್ಟಿಸುತ್ತಾ ಅದೇ ಬಿಸಿಯನ್ನು ಈ ಕ್ಷಣದವರೆಗೂ ಕಾಯ್ದಿಟ್ಟುಕೊಂಡಿರುವ ಕೆಜಿಎಫ್ ಬಿಡುಗಡೆಗೆ ಸಜ್ಜಾಗಿದೆ. ಯಶ್ ಈ ಎರಡು ವರ್ಷಗಳಲ್ಲಿ ಕೆಜಿಎಫ್ಗಾಗಿ ಪಟ್ಟ ಪರಿಶ್ರಮ ನೋಡಿದವರೆಲ್ಲ ಚಿತ್ರೀಕರಣ ಮುಗಿಸಿಕೊಂಡ ನಂತರ ಅವರು ಸುದೀರ್ಘವಾಗಿ ರೆಸ್ಟು ತೆಗೆದುಕೊಳ್ಳ ಬಹುದೆಂದೇ ಭಾವಿಸಿದ್ದರು.

ಆದರೆ ಯಶ್ ಭಾರೀ ಹುರುಪಿನೊಂದಿಗೆ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕಾಗಿ ತಯಾರಾಗಿದ್ದಾರೆ. ಆದ್ದರಿಂದಲೇ ಸೆಪ್ಟೆಂಬರ್ ಮೂರನೇ ತಾರೀಕಿನಿಂದ ಈ ಚಿತ್ರದ ಚಿತ್ರೀಕರಣವೂ ಶುರುವಾಗಲಿದೆ. ಈ ಚಿತ್ರವನ್ನು ಬಹು ಬೇಗನೆ ಮುಗಿಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಅತ್ತ ಮಗುವಾಗೋ ಖುಷಿ, ಇತ್ತ ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ತೆರೆ ಕಾಣಲಿರೋ ಸಡಗರ… ಇಂಥಾದ್ದರ ಮಧ್ಯೆಯೇ ಯಶ್ ಬಿಡುವು ಕೊಡದೆ ಹೊಸಾ ಚಿತ್ರದತ್ತ ಮುಖ ಮಾಡಿರೋದನ್ನ ಕಂಡು ಅಭಿಮಾನಿಗಳು ಖುಷಿಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply