ಗೌರಿ ಹತ್ಯೆ ಪ್ರಕರಣ- ಸನಾತನ ವಿರುದ್ಧ ವದಂತಿ ತಡೆಗೆ ಕೋರ್ಟ್ ಮೊರೆ: ವಕ್ತಾರ ಚೇತನ್ ರಾಜಹನ್ಸ್

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ನರೇಂದ್ರ ದಾಬೊಲ್ಕರ್ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸನಾತನ ಸಂಸ್ಥೆ ಮತ್ತೆ ಸ್ಪಷ್ಟನೆ ನೀಡಿದ್ದು, ತಮ್ಮ ಸಂಸ್ಥೆಯ ವಿರುದ್ಧ ವದಂತಿ ಹರಡುವುದನ್ನು ತಡೆಯಲು ಕೋರ್ಟ್ ಮೊರೆ ಹೋಗುವುದಾಗಿ ಸನಾತನ ಸಂಸ್ಥೆ ವಕ್ತಾರ ಚೇತನ್ ರಾಜಹನ್ಸ್ ಹೇಳಿದ್ದಾರೆ.

ಇತ್ತೀಚೆಗೆ ಬಂಧಿಸಲ್ಪಟ್ಟ ಒಂಬತ್ತು ಜನ ಸನಾತನ ಸಂಸ್ಥೆಗೆ ಸೇರಿದವರಲ್ಲ. ಈ ಪ್ರಕರಣದಲ್ಲಿ ಅನಗತ್ಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಒಂಬತ್ತು ಜನರ ಪೈಕಿ ಐವರ ಹೆಸರುಗಳನ್ನ ಮಾಧ್ಯಮಗಳ ಮೂಲಕ ಮಾತ್ರ ನಾವು ತಿಳಿದುಕೊಂಡಿದ್ದೇವೆ. ಬಂಧಿತರು ನಮ್ಮೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಸಂಸ್ಥೆ ವಿರುದ್ಧ ವದಂತಿ ತಡೆಗೆ ಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಎಂದು ಸನಾತನ ಸಂಸ್ಥೆ ವಕ್ತಾರ ಚೇತನ್ ತಿಳಿಸಿದ್ದಾರೆ.

ಈ ನಡುವೆ ಅಗತ್ಯ ಬಿದ್ರೆ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಕೈವಾಡ?

ಈ ಹಿಂದೆಯೂ 2017ರ ಸೆಪ್ಟೆಂಬರ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸ್ಥೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚೇತನ್, ಗೌರಿ ಹತ್ಯೆ ಕೇಸಿನಲ್ಲಿ ಬಲಪಂಥೀಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇತರೆ ಹಿಂದೂ ಸಂಘಟಕರ ಹತ್ಯೆಯ ಹಿಂದಿದ್ದಾರೆ ಎನ್ನುವ ಗಾಳಿಸುದ್ದಿಯೂ ಕೇಳಿಬರುತ್ತಿವೆ. ಸನಾತನ ಸಂಸ್ಥೆಯ ಆಶ್ರಮದ ಒಳಗೆ ಇದುವರೆಗೂ ಯಾರು ಬಂದಿಲ್ಲ. ಗೌರಿ ಹತ್ಯೆಗೂ, ನಮಗೂ, ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದರು.

ಎಸ್‍ಐಟಿ ಅಧಿಕಾರಿಗಳ ತಂಡ ಆಶ್ರಮದೊಳಗೆ ಹೋಗಿದೆ ಎನ್ನುವ ಸುದ್ದಿ ಪ್ರಕಟವಾಗಿದೆ. ಆದರೆ ಯಾರೂ ಇದೂವರೆಗೆ ಬಂದಿಲ್ಲ. ಅನಾವಶ್ಯಕವಾಗಿ ಬಲಪಂಥೀಯರನ್ನು ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದ ಅವರು, ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳು ನ್ಯಾಯ ರೀತಿಯಲ್ಲಿ ತನಿಖೆಯಾಗುತ್ತಿಲ್ಲ. ರಾಜಕೀಯ ಒತ್ತಡದಿಂದ ಸನಾತನ ಸಂಸ್ಥೆ ಮೇಲೆ ಅನುಮಾನ ವ್ಯಕ್ತವಾಗುವಂತೆ ಮಾಡಲಾಗುತ್ತಿದೆ. ಪ್ರಶಾಂತ್ ಪೂಜಾರಿ ಕೊಲೆಯಾದಾಗ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಎಸ್‍ಐಟಿ ಮಾಡಲಿಲ್ಲ, ಗೌರಿ ಹತ್ಯೆ ಆದಾಗ ಮಾತ್ರ ಯಾಕೆ ಎಂದು ಪ್ರಶ್ನಿಸಿದರು. ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಚೇತನ್ ಹೇಳಿದ್ದರು.

ಕುಣಿಗಲ್ ಗಿರಿ ರೀತಿ ಪ್ರಚಾರಕ್ಕಾಗಿ ನಾವು ಎಸ್‍ಐಟಿ ಮುಂದೆ ಹೋಗಲು ನಾವು ಸಿದ್ಧರಿಲ್ಲ. ಎಸ್‍ಐಟಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ನಮ್ಮನ್ನು ಪ್ರಶ್ನಿಸಿಲ್ಲ. ಸನಾತನ ಸಂಸ್ಥೆಯ ಕಾರ್ಯಕರ್ತರ ತನಿಖೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿವೆ. ಗೌರಿ ಕೊಲೆಗೂ ಸನಾತನ ಸಂಸ್ಥೆಗೂ ಸಂಬಂಧವಿಲ್ಲ. ನಮ್ಮಿಂದ ಯಾವುದೇ ಸಹಾಯ ಕೇಳಿದರೆ ಹೇಳಲು ಸಂಸ್ಥೆ ಸಿದ್ಧವಿದೆ. ಅಗತ್ಯಬಿದ್ದಲ್ಲಿ ಕಾನೂನಿನ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ಇದೇ ವೇಳೆ ಅಮೃತೇಶ್ ಹೇಳಿಕೆ ನೀಡಿದ್ದರು. ಅಂದು ಸನಾತನ ಸಂಸ್ಥೆ ಸುದ್ದಿಗೋಷ್ಠಿಯ ನಡೆಸುವ ವಿಚಾರ ತಿಳಿದು ಎಸ್‍ಐಟಿಯ 8 ಮಂದಿ ಸದಸ್ಯರು ಪ್ರೆಸ್ ಕ್ಲಬ್‍ಗೆ ಬಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *