ಒಳ್ಳೆ ಚಾನ್ಸ್ ಸಿಗುತ್ತೆ, ಪೂಜೆ ನಡೆಸಿ, ಮಗು ಬಲಿ ಕೊಡ್ಬೇಕು- ನಟಿಗೆ ಸಹ ನಿರ್ಮಾಪಕನಿಂದ ಮೋಸ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಹ ನಿರ್ಮಾಪಕ ಸಹನಟಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿರುವ ಆರೋಪ ಕೇಳಿ ಬರುತಿದೆ.

ನಟಿ ಚೇತನಾರಿಗೆ ಸಹ ನಿರ್ಮಾಪಕ ನಾಗೇಶ್ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಮಂಜಿನಹನಿ” ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿದ್ದ ಚಲನಚಿತ್ರವಾಗಿದ್ದು, ಈ ಚಿತ್ರವನ್ನು ಸ್ವತಃ ರವಿಚಂದ್ರನ್ ಅವರೇ ನಟಿಸಿ, ನಿರ್ದೇಶಿಸುತ್ತಿದ್ದರು.

ಮೊದಲಿಗೆ ಸಂದೇಶ್ ನಾಗರಾಜ್ ಮಂಜಿನಹನಿ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ನಂತರ ಕಾರಣಾಂತರಗಳಿಂದ ಚಿತ್ರದಿಂದ ಸಂದೇಶ್ ನಾಗರಾಜ್ ಹೊರಬಂದಿದ್ದರು. 2013ರಲ್ಲಿ ಮಂಜಿನಹನಿ ಸಿನಿಮಾ ಸೆಟ್ಟೇರಿತ್ತು. ನಂತರ ಆರ್ಥಿಕ ಸಮಸ್ಯೆಗಳಿಂದ ಶೂಟಿಂಗ್ ಶುರುವಾಗದೇ ಚಿತ್ರ ನಿಂತು ಹೋಗಿತ್ತು. ಸಂದೇಶ್ ನಾಗರಾಜ್ ರಿಂದ ಸಿನಿಮಾ ಖರೀದಿಸಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ಮಾಣಕ್ಕೆ ಮುಂದಾಗಿದ್ದರು. 2015ರಲ್ಲಿ ರವಿಚಂದ್ರನ್ ನಿರ್ಮಾಣದಲ್ಲಿ ಮತ್ತೆ ಮಂಜಿನಹನಿ ಚಿತ್ರೀಕರಣ ಶುರುವಾಯಿತು. ಈ ವೇಳೆ ಹೊಸಕೋಟೆ ಮೂಲದ ನಾಗೇಶ್ ಸಿನಿಮಾಗೆ ಸಹ ನಿರ್ಮಾಪಕ ಆಗಿದ್ದಾರೆ.

ನಟಿ ಚೇತನಾಗೆ ಮಂಜಿನಹನಿ ಸಿನಿಮಾದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ನಾಗೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ನಟಿ ಚೇತನಾಗೂ ಸಹ ನಿರ್ಮಾಪಕ ನಾಗೇಶ್‍ಗೂ ಪರಿಚಯವಾಗಿತ್ತು. ಕೆಲ ದಿನಗಳ ನಂತರ ಮತ್ತೆ ಮಂಜಿನಹನಿ ಸಿನಿಮಾದ ಚಿತ್ರೀಕರಣ ನಿಂತುಹೋಯಿತು. ಈ ವೇಳೆ ನಾಗೇಶ್, ನಟಿ ಚೇತನಾ ನಂಬರ್ ಗೆ ಮೆಸೇಜ್ ಮಾಡಲು ಶುರುಮಾಡಿದ. ಮನು ಎಂಬ ಹೆಸರಿನಲ್ಲಿ ನಾಗೇಶ್ ನಟಿಗೆ ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಿ, ನೀನು ಸಿನಿಮಾರಂಗದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಬೇಕು. ನೀನು ಒಳ್ಳೆ ಹೆಸರು ಮಾಡಬೇಕಾದರೆ ಗೌರಿ ಎಂಬಾಕೆಯನ್ನು ಭೇಟಿಯಾಗು ಎಂದು ಹೇಳಿದ್ದನು.

ಮೊಬೈಲಿನಲ್ಲಿ ಗೌರಿಯೊಂದಿಗೆ ನಟಿ ಚೇತನ ಮಾತನಾಡಿ, ನಿನ್ನ ಹೆಸರಲ್ಲಿ ಪೂಜೆ ಮಾಡಿಸಬೇಕು. ನಿನಗೆ ದೋಷವಿದೆ. ಪೂಜೆ ಮಾಡಿ ಮಗುವನ್ನು ಬಲಿ ಕೊಡಬೇಕು ಎಂದು ಹೇಳಿದ್ದಳು. ಅಲ್ಲದೇ ನಾಗೇಶ್ ಕೂಡ ನಿನ್ನ ಹೆಸರಲ್ಲಿ ನಾವು ಪೂಜೆ ಮಾಡ್ತಿವಿ, ನಿನಗೆ ಒಳ್ಳೆ ಹೆಸರು ಬರತ್ತೆ, ಒಳ್ಳೆ ಅವಕಾಶಗಳು ಬರತ್ತೆ ಎಂದು ನಂಬಿಸಿದ್ದನು. ನಾಗೇಶ್ ಕಳೆದ 3 ವರ್ಷಗಳಿಂದ ನಟಿಯಿಂದ ಸುಮಾರು ಎಂಟೂವರೆ ಲಕ್ಷ ಹಣ ಪೀಕಿದ್ದಾನೆ.

ನಾಗೇಶ್ ಕಳೆದ ಆಗಸ್ಟ್ 1ರಂದು ವೀಣಾ ಅಕೌಂಟ್ ನಂಬರ್ ಗೆ ಮತ್ತೆ 50 ಸಾವಿರ ಜಮಾ ಮಾಡಿಸಿಕೊಂಡಿದ್ದಾನೆ. ನಂತರ ನಟಿಯ ಫೋನ್ ಕರೆಗೂ ಸಿಗದೇ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಮೋಸ ಹೋದ ಸಹನಟಿ ಚೇತನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಸಹ ನಿರ್ಮಾಪಕ ನಾಗೇಶ್ ಹಾಗೂ ಗೌರಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *