ಚಿಕ್ಕಮಗಳೂರು: ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮಕ್ಕೆ ರಸ್ತೆಯಿಲ್ಲ, ಹೀಗಾಗಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಮೃತ ದೇಹವನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಸಾಗಿಸಿದ್ದಾರೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಹೊಳೆಕುಡಿಗೆ ಲಕ್ಷ್ಮಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ದೇಹವನ್ನು ಗ್ರಾಮಕ್ಕೆ ತರಲು ಕಾಲು ದಾರಿಯ ಮೂಲಕ 12 ಕಿ.ಮೀ. ಸುತ್ತಿ ಬರಬೇಕು. ಆ ದಾರಿಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ, ಹೀಗಾಗಿ ತೆಪ್ಪದ ಮೂಲಕವೇ ಶವವನ್ನು ಸಾಗಿಸಬೇಕಾಯಿತು.

ಹೊಳೆಕುಡಿಗೆ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ ಈ ಗ್ರಾಮಕ್ಕೆ 3 ದಶಕಗಳಿಂದಲೂ ರಸ್ತೆ ಕಲ್ಪಿಸಿಲ್ಲ ಹಾಗೂ ಮೂಲಸೌರ್ಕಗಳಿಂದ ಜನರು ವಂಚಿತರಾಗಿದ್ದಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಮೂಡಿಗೆರೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೃತರ ಸಂಬಂಧಿ ರುದ್ರಯ್ಯ ದೂರಿದ್ದಾರೆ.

ಇತ್ತೀಚೆಗೆ ಲಕ್ಷ್ಮಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ನದಿಯಲ್ಲಿಯೇ ಸಾಗಬೇಕಾಯಿತು. ನದಿ ಪ್ರವಾಹ ಹೆಚ್ಚಾದರೆ ವಾರಗಟ್ಟಲೇ ಮನೆಯಿಂದ ಹೊರಗೆ ಹೋಗಲು, ಮಕ್ಕಳು ಶಾಲೆಗೆ ತೆರಳವುದು ಕಷ್ಟವಾಗುತ್ತದೆ. ನಗರಕ್ಕೆ ಹೋಗಲು ತೆಪ್ಪದ ಮೂಲಕವೇ ಸಾಗಬೇಕು. ಬೆಳಗ್ಗೆಯಿಂದ ಸಂಜೆವರೆಗೆ ದೋಣಿಯ ಮೂಲಕ ಚಲಿಸುವುದು ಕಷ್ಟ. ಅನೇಕ ಬಾರಿ ಜಿಲ್ಲಾಡಳಿತಕ್ಕೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೇವೆ. ಮಳೆಗಾಲ ನಿಂತ ಮೇಲೆ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳುತ್ತ ಅಧಿಕಾರಿಗಳು ಕಾಲ ದೂಡುತ್ತಿದ್ದಾರೆ ಎಂದು ಚಂದ್ರಶೇಖರ್ ಅಳಲು ತೋಡಿಕೊಂಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply