ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನದಂದು ಸಮ್ಮಿಶ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ. ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಮ್ಮತಿಸಿದೆ.

ಶುಕ್ರವಾರ ಕ್ಯಾಬಿನೆಟ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಜೆಟ್‍ನಲ್ಲಿ ಘೋಷಿಸಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ 2 ಲಕ್ಷ ರೂ.ವರೆಗಿನ ರೈತರ ಸಾಲ ಹಾಗೂ ಈಗಾಗಲೇ ಸಾಲ ಪಾವತಿ ಮಾಡಿರುವ ರೈತರಿಗೆ 25 ಸಾವಿರ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಾಲಮನ್ನಾದ ಸಂಪೂರ್ಣ ಜವಾಬ್ದಾರಿ ನಿರ್ವಾಹಣೆಗೆ ಇಬ್ಬರು ಐಎಎಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಸಾಲಮನ್ನಾದಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರ್ಕಾರವು ಒಟ್ಟು 30,163 ಕೋಟಿ ರೂ. ಪಾವತಿಸಬೇಕಾಗಿದೆ. ಆದರೆ ಒಂದೇ ಬಾರಿ ಸಾಲ ಮನ್ನಾಕ್ಕೆ ಬ್ಯಾಂಕುಗಳು ಒಪ್ಪುತ್ತಿಲ್ಲ. ಹೀಗಾಗಿ ಬಡ್ಡಿ ಸೇರಿಸಿ ಆಗುವ ಒಟ್ಟು ಮೊತ್ತವನ್ನು 4 ಕಂತುಗಳಲ್ಲಿ ಕಟ್ಟಲು ನಿರ್ಧರಿಸಲಾಗಿದೆ. ಇದರಿಂದಾಗಿ 2018-19ರಲ್ಲಿ 6,500 ಕೋಟಿ ರೂ., 2019-20ರಲ್ಲಿ 6,656 ಕೋಟಿ ರೂ., 2020-21ರಲ್ಲಿ 7,876 ಕೋಟಿ ರೂ. ಹಾಗೂ 2021-22ರಂದು 7,131 ಕೋಟಿ ರೂ, ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.

ಈ ನಿರ್ಧಾರದಿಂದ ರಾಷ್ಟ್ರೀಕೃತ ಬ್ಯಾಂಕುಗಳ 16,94,000 ಸುಸ್ತಿ ಹಾಗೂ 6,27,000 ಚಾಲ್ತಿ ಸೇರಿ ಒಟ್ಟು 22 ಲಕ್ಷ ರೈತರಿಗೆ ಸಹಾಯವಾಗಲಿದೆ. ಬ್ಯಾಂಕುಗಳಿಗೆ ಹಣ ಪಾವತಿಸಲು ನಾಲ್ಕು ಕಂತುಗಳವರೆಗೆ ಸರ್ಕಾರ ಕಾಯುವುದಿಲ್ಲ. ಅದಕ್ಕೂ ಮುನ್ನವೇ ಪಾವತಿಸುವ ಸಾಮರ್ಥ್ಯವು ಸರ್ಕಾರಕ್ಕೆ ಇದೆ ಎಂದರು.

ಋಣಮುಕ್ತ ಕಾಯ್ದೆ ಜಾರಿ
ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು 1976ರಲ್ಲಿ ಋಣಮುಕ್ತ ಅಧಿನಿಯಮವನ್ನು ಜಾರಿಗೆ ತಂದಿದ್ದರು. ಈಗ ನಮ್ಮ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತರಲು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದೆ. ಋಣಮುಕ್ತ ಕಾಯ್ದೆ ಜಾರಿ ಅನ್ವಯ ಖಾಸಗಿ ಲೇವಾದೇವಿದಾರರಿಂದ ಪಡೆದಿರುವ 1.25 ಲಕ್ಷದ ಒಳಗಿನ ಸಾಲವೂ ಮನ್ನಾ ಆಗಲಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಿ ರಾಷ್ಟ್ರಪತಿಗಳ ಸಹಿಗೆ ಕಳುಹಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಸಿಎಂ ವಿವರಿಸಿದರು. ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾದರೆ, ಅವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೇರಿದ ಹಣ ಎಷ್ಟು?

ಇದುವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25,16,89,808 (25.16 ಕೋಟಿ ರೂ.) ಡಿಡಿ ರೂಪದಲ್ಲಿ ಬಂದಿದೆ. ಇನ್ನು ಸರ್ಕಾರಿ ನೌಕರರ ವೇತನದಲ್ಲಿ ಒಂದು ದಿನ ಮೊತ್ತವನ್ನು ನೆರೆ ಸಂತ್ರಸ್ತರಿಗೆ ನೀಡಲು ನಿರ್ಧರಿದ್ದಾರೆ. ಇದರಿಂದ 102 ಕೋಟಿ ರೂ. ಪರಿಹಾರ ನಿಧಿಗೆ ಸೇರಿದೆ ಎಂದು ತಿಳಿಸಿದ ಕುಮಾರಸ್ವಾಮಿ, ಮಹಾಮಳೆಗೆ ಕೊಡಗಿನಲ್ಲಿ 3 ಸಾವಿರ ಕೋಟಿ ರೂ. ನಷ್ಟವಾಗಿದ್ದು, ತುರ್ತಾಗಿ 2 ಸಾವಿರ ಕೋಟಿ ರೂ. ನೆರವು ನೀಡುವಂತೆ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *