ಮೋದಿ ಅಪ್ಪುಗೆಯ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

ಬರ್ಲಿನ್: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಎರಡು ದಿನಗಳ ಜರ್ಮನಿ ಪ್ರವಾಸದಲ್ಲಿದ್ದು, ಈ ವೇಳೆ ಸಂಸತ್ತಿನಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದರ ಬಗ್ಗೆ ಕೊನೆಗೂ ಮಾತನಾಡಿದ್ದಾರೆ.

ಬುಧವಾರ ಹ್ಯಾಮ್‍ಬರ್ಗ್ ನ ಬುಸೆರೀಯಸ್ ಸಮ್ಮರ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬರು ನೀವು ಮೋದಿಯವರನ್ನು ಅಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ನನ್ನ ಮೇಲೆ ದ್ವೇಷದ ಮಾತುಗಳನ್ನು ಆಡುತ್ತಿದ್ದರು. ಅಂತಹ ಸಂದರ್ಭದಲ್ಲಿ ನಾನು ಪ್ರೀತಿ, ಬಾಂಧವ್ಯವನ್ನು ತೋರಿಸಲು ಅವರ ಬಳಿಗೆ ಹೋಗಿ ಅವರನ್ನು ತಬ್ಬಿಕೊಂಡೆ ಎಂದು ಹೇಳಿದರು.

ನಾನು ಅವರಿಗೆ ಈ ಜಗತ್ತಿನಲ್ಲಿ ದ್ವೇಷವೊಂದೇ ಇರುವುದಲ್ಲ. ನಾವು ಅಂದುಕೊಳ್ಳುವಷ್ಟು ಪ್ರಪಂಚ ಕೆಟ್ಟದಾಗಿಲ್ಲ. ಎಲ್ಲಾ ಕೆಟ್ಟದಾಗಿದೆ ಎಂದು ಭಾವಿಸುವಂತಿಲ್ಲ ಎಂಬುದನ್ನು ತೋರಿಸಲು ನಾನು ಅವರನ್ನು ಆಲಂಗಿಸಿದೆ. ಅಪ್ಪುಗೆ ವೇಳೆ ಖುದ್ದು ನರೇಂದ್ರ ಮೋದಿಯವರು ಗಲಿಬಿಲಿಗೊಳಗಾಗಿ, ಹಿಂದಕ್ಕೆ ಸರಿಯಲು ಯತ್ನಿಸಿದರೆ ಹೊರತು, ಅವರು ನನ್ನ ಮನಸ್ಥಿತಿಯನ್ನು ಅರಿಯುವ ಯೋಚನೆ ಮಾಡಲಿಲ್ಲ ಎಂದು ತಿಳಿಸಿದರು.

ಜುಲೈ 20 ರಂದು ನಡೆದ ಸಂಸತ್ತಿನ ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯ ಗೊತ್ತುವಳಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುದೀರ್ಘ ಭಾಷಣಮಾಡಿದ್ದರು. ಭಾಷಣದ ವೇಳೆ ಆಢಳಿತಾರೂಢ ಎನ್‍ಡಿಎ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾಷಣದ ಬಳಿಕ ನೇರವಾಗಿ ಪ್ರಧಾನಿ ಬಳಿ ತೆರಳಿ ಅವರನ್ನು ಅಪ್ಪಿಕೊಂಡಿದ್ದರು.

ರಾಹುಲ್ ಗಾಂಧಿಯವರ ನಡೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಸ್ವ-ಪಕ್ಷೀಯ ನಾಯಕರು ಸಹ ಪರೋಕ್ಷವಾಗಿ ರಾಹುಲ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *