ತ್ಯಾಜ್ಯ ವಿಲೇವಾರಿಗೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತ ಯುವಕರು!

ಚೆನ್ನೈ: ಸ್ಥಳೀಯ ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ಹಾಗೂ ಅಧಿಕಾರಿಗಳ ಉದಾಸೀನತೆಯ ವಿರುದ್ಧ ಕಿಡಿಕಾರಿದ ಮೂವರು ಯುವಕರು 150 ಅಡಿ ಎತ್ತರ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆ ನಗರದ ಹೊರವಲಯದಲ್ಲಿ ಬುಧವಾರ ನಡೆದಿದೆ. ಪ್ರತಿಭಟನಾಕಾರರನ್ನು ದಿನಕರನ್(35), ಪ್ರಭಾಕರನ್(24) ಹಾಗೂ ವಿಕ್ರಮ್(36) ಎಂದು ಗುರುತಿಸಲಾಗಿದ್ದು, ಈ ಮೂವರು ಕಸದ ರಾಶಿಯನ್ನು ವಿಲೇವಾರಿ ಮಾಡುವಂತೆ ಆಗ್ರಹಿಸಿದ್ದಾರೆ.

ದಿನಕರನ್, ಪ್ರಭಾಕರನ್ ಹಾಗೂ ವಿಕ್ರಮ್ ಈ ಮೂವರು ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ತಿರುಮಲೈ ಅಲ್ವಾಪುರಂ ಮುಖ್ಯರಸ್ತೆಯಲ್ಲಿರುವ ಮೊಬೈಲ್ ಟವರ್ ಏರಿ ಕುಳಿತಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಈ ಮೂವರನ್ನು ಟವರ್ ನಿಂದ ಟವರ್ ನಿಂದ ಕೆಳಗಿಳಿಯುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಕೂಡಲೆ ಈ ಬಗ್ಗೆ ಶಂಕರ್ ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕೆಳಗಿಳಿಯುವಂತೆ ಯುವಕರನ್ನು ಪರಿಪರಿಯಾಗಿ ಬೇಡಿಕೊಂಡ್ರೂ, ಯಾವುದೇ ಪ್ರಯೋಜನವಾಗಿಲ್ಲ. ಮೂವರು ಪೊಲೀಸರ ಮಾತನ್ನು ನಿರಾಕರಿಸಿದ್ದಾರೆ. ಅಲ್ಲದೇ ನಮ್ಮ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿರುವ ಲಾರಿ ಚಾಲಕರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆಯಿಟ್ಟಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಈಗಾಗಲೇ ಲಾರಿ ಮಾಲಕ ಅರೋಕಿಯಾ ರಾಜ(40) ಎಂಬಾತನನ್ನು ಬಂಧಿಸಲಾಗಿದ್ದು, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ ಅಂತ ಪ್ರತಿಭಟನಾಕಾರರಿಗೆ ಪೊಲೀಸರು ಮಾಹಿತಿ ನೀಡಿದ್ರು. ಪೊಲೀಸರ ಹೇಳಿಕೆಯ ಬಳಿಕ ಮೂವರು ಟವರ್ ನಿಂದ ಕೆಳಗಿಳಿದಿದ್ದಾರೆ. ಆದ್ರೆ ಈ ವೇಳೆ ಪ್ರತಿಭಟನಾಕಾರ ದಿನಕರನ್ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಉಳಿದ ಇಬ್ಬರನ್ನು ಶಂಕರ್ ನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *