ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

ಬೆಂಗಳೂರು: ಹಸಿವಿನಿಂದ ಮಕ್ಕಳು ಹಾಗೂ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹೀಗಾಗಿ ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ರಾಮನಾಥಪುರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಎಸೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನು ದೇವರನ್ನು ನಂಬುವ ವ್ಯಕ್ತಿ. ಘಟನೆಯಾದ ಮಾರನೇ ದಿನ ಸುದ್ದಿ ಮಾಡಲಾಗಿದೆ. ನನ್ನಿಂದ ತಪ್ಪಾಗಿದೆ ಬಿಡಿ ಎಂದರು.

25 ವರ್ಷಗಳಿಂದ ಆಯ್ಕೆಯಾಗಿರುವ ನಾಯಕರು ಹಾಗೂ ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ದೂರಿದರು.

ನಾನು ಬೇಕು ಅಂತಾ ಮಾಡಲಿಲ್ಲ. ಆ ರೀತಿಯ ಮನೋಭಾವನೆಯೂ ನನ್ನಲ್ಲಿ ಇಲ್ಲ. ಹಿಂದೆ ಕುಳಿತಿದ್ದ ಮಹಿಳೆಯರು ಒಂದೇ ಸಮನೇ ಬೇಕು ಅಂತಾ ಕೂಗುತ್ತಿದ್ದರು. ಹೀಗಾಗಿ ಅಲ್ಲಿಗೆ ಹೋಗಿ ಕೊಡುವುದಕ್ಕೆ ಆಗಲಿಲ್ಲ, ನಿಂತಲ್ಲಿಯೇ ಕೊಡಬೇಕಾದ ಪರಿಸ್ಥಿತಿ ಬಂದಿತ್ತು. ಅದನ್ನು ಎಸೆದಿದ್ದಾರೆ ಅಂತಾ ಹೇಳಿದರೆ ಹೇಗೆ? ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಎಲ್ಲಾ ಮಾಧ್ಯಮದವರು ಅಂದು ಅಲ್ಲಿಯೇ ಇದ್ದರು. ಆದರೆ ಅಂದೇ ಸುದ್ದಿ ಮಾಡಲಿಲ್ಲ ಎಂದರು.

ನಿರಾಶ್ರಿತ ಕೇಂದ್ರದಲ್ಲಿ ಇದ್ದವರು ಶ್ರೀಮಂತರಲ್ಲ, ಎಲ್ಲರೂ ಬಡವರು. ನಾನು ಪ್ರವಾಹ ಪೀಡಿತ ಭಾಗಗಳಿಗೆ ರಾತ್ರಿ, ಹಗಲು ಹೋಗಿದ್ದೇನೆ. ಏನು ಗ್ರಹಚಾರಾನೋ ಏನೋ, ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ವಿರುದ್ಧ ಅಭಿಯಾನವೇ ಶುರುವಾಗಿದೆ ಎಂದು ಹೇಳಿದ ಸಚಿವರು, ಕೊಡಗು ಹಾಗೂ ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಚಿವರು ಬಂದ ಪರಿಸ್ಥಿತಿಯನ್ನು ನೋಡಲಿ. ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ, ಆದರೂ ನೆರವಿಗೆ ನಿಂತೆ. ಈಗ ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಚುನಾವಣೆ ವೇಳೆ ರಾಜಕೀಯ ಮಾಡೋಣ, ಇಂತಹ ಸಂದರ್ಭದಲ್ಲಿ ಬೇಡ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *