ಪತ್ನಿ ಶವ ಫ್ರಿಡ್ಜ್, ಮಕ್ಕಳ ಶವ ಕಪಾಟು, ಸೂಟ್‍ಕೇಸ್, ನೆಲದ ಮೇಲೆ – ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಲಕ್ನೋ: ಮೂವರು ಮಕ್ಕಳು, ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾದ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಅಲಹಾಬಾದಿನಲ್ಲಿ ಬೆಳಕಿಗೆ ಬಂದಿದೆ.

ಮನೋಜ್ ಕುಶ್ವಾಹ (35) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ. ಪತ್ನಿ ಶ್ವೇತಾ (30) ಮೂವರು ಪುತ್ರಿಯರಾದ ಪ್ರೀತಿ (8), ಶಿವಾನಿ (6) ಮತ್ತು ಶ್ರೇಯಾ (3) ಮೃತ ದುರ್ದೈವಿಗಳು. ಈ ಘಟನೆ ಧೂಮಂಗಂಜ್ ಪೊಲೀಸ್ ಠಾಣೆ ಪ್ರದೇಶದ ಪೀಪಲ್ ಗಯಾನ್ ನಲ್ಲಿ ಮೃತ ಕುಟುಂಬದ ಮನೆಯಲ್ಲಿಯೇ ಶವ ಪತ್ತೆಯಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮೃತ ಮನೋಜ್ ಕುಟುಂಬದವರು ಸೋಮವಾರ ಮನೆಯ ಬಾಗಿಲು ಹಾಕಿಕೊಂಡಿದ್ದು, ಸಂಜೆಯಾದರೂ ಬಾಗಿಲು ತೆಗೆದಿರಲಿಲ್ಲ. ಆದರೆ ಮನೆಯಲ್ಲಿ ಜೋರಾಗಿ ಟಿವಿ ಮತ್ತು ರೇಡಿಯೋ ಶಬ್ದ ಕೇಳಿ ಬರುತ್ತಿತ್ತು. ಬಳಿಕ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮನೋಜ್ ಮನೆ ಬಾಗಿಲು ಬಡಿದಿದ್ದಾರೆ. ಆದರೆ ಮನೆಯ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಬಾಗಿಲು ಮುರಿದು ಪೊಲೀಸರು ಒಳಹೋಗಿದ್ದು, ಬಾಗಿಲು ತೆರೆಯುತ್ತಿದ್ದಂತೆ ಮನೋಜ್ ಸೀಲಿಂಗ್ ಫ್ಯಾನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಳಿಕ ಉಳಿದವರನ್ನು ಹುಡುಕಾಡಿದಾಗ ಪತ್ನಿ ಶ್ವೇತಾ ಶವ ಫ್ರಿಡ್ಜ್ ನಲ್ಲಿ, ಒಬ್ಬ ಮಗಳ ಶವ ಕಪಾಟಿನಲ್ಲಿ, 2ನೇ ಮಗಳ ಶವ ಸೂಟ್ ಕೇಸ್ ನಲ್ಲಿ ಮತ್ತು ಕೊನೆಯ ಮಗಳ ಶವ ನೆಲದ ಮೇಲೆ ಬಿದ್ದಿದ್ದ ಸ್ಥಿತಿಯಲ್ಲಿ ಒಟ್ಟು ಐದು ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿ ನಿತಿನ್ ತಿವಾರಿ ಹೇಳಿದ್ದಾರೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಸೋಮವಾರ ರಾತ್ರಿ ಮನೆಯಲ್ಲಿ ಟಿವಿ ಮತ್ತು ರೇಡಿಯೋ ಶಬ್ದ ಕೇಳಿ ಬರುತ್ತಿತ್ತು. ಜೊತೆಗೆ ಮಕ್ಕಳು ಜೋರಾಗಿ ಅಳುತ್ತಿದ್ದ ಶಬ್ದವು ಕೇಳಿಸುತ್ತಿತ್ತು ಎಂದು ಸಹೋದರನ ಪತ್ನಿ ಹೇಳಿದ್ದಾರೆ. ಮೃತ ಮನೋಜ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿ ನಂತರ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮನೋಜ್ ಮತ್ತು ಪತ್ನಿ ಮಧ್ಯೆ ಇತ್ತೀಚೆಗೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಈ ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದು ಬರುತ್ತದೆ. ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಈ ಕುರಿತು ಎಲ್ಲ ರೀತಿಯಲ್ಲೂ ತನಿಖೆ ಮಾಡಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶವ ಪತ್ತೆಯಾದ ಸ್ಥಳದಲ್ಲಿ ಯಾವ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ನಿತಿನ್ ತಿವಾರಿ ಅವರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *