ಕಾಫಿ ನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ -ಮಂಗಳೂರಿಗೆ ಪ್ರಯಾಣ ಕಷ್ಟಕರ

ಚಿಕ್ಕಮಗಳೂರು: ಕುಂಭದ್ರೋಣ, ಪುನರ್ವಸು, ಆಶ್ಲೇಷ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿಗರು ಒಂದೇ ರಾತ್ರಿ ಮಳೆಯ ಆರ್ಭಟಕ್ಕೆ ಕಂಗಾಲಾಗಿದ್ದಾರೆ. 2 ದಿನ ಸೂರ್ಯನ ಕಂಡು ನಿಟ್ಟುಸಿರಿ ಬಿಟ್ಟಿದ್ದ ಮಲೆನಾಡಿಗರು ಮತ್ತೆ ಉಸಿರು ಬಿಗಿ ಹಿಡಿದಿದ್ದಾರೆ. ರಾತ್ರಿಯಿಂದ ಒಂದೇ ಸುಮನೆ ಸುರಿಯುತ್ತಿರೋ ಮಳೆಗೆ ನೆರೆಭೀತಿ ಎದುರಾಗಿದೆ.

ಕಾಫಿನಾಡಿನ ಪರಿಸ್ಥಿತಿ ಕೊಡಗಿಗಿಂತ ಭಿನ್ನವಾಗೇನು ಇಲ್ಲ. ಚಿಕ್ಕಮಗಳೂರಿನಲ್ಲಿ ಮೂರು ದಶಕಗಳ ಬಳಿಕ ಕಂಡು ಕೇಳರಿಯದ ರೀತಿ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ವಾರ್ಷಿಕ ಮಳೆ 1757 ಮಿ.ಮೀ. ಆದ್ರೆ, ಆಗಸ್ಟ್ 15ರ ವೇಳೆಗೆ 1,873 ಮಿ.ಮೀ. ಮಳೆಯಾಗಿರೋದು ಕಾಫಿನಾಡನ್ನ ಕಂಗೇಡಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಗ್ರಾಮಗಳಲ್ಲಿ ಗುಡ್ಡ ಕುಸಿದು ಮಣ್ಣು ಮನೆಗೆ ಅಪ್ಪಳಿಸಿದೆ. ಜಯಪುರ ಸಮೀಪದ ಬಸರೀಕಟ್ಟೆ ಬಳಿ ಭೂಕುಸಿತ ಉಂಟಾಗಿದ್ದು, ಜನಸಾಮಾನ್ಯರು ದಾರಿ ಇಲ್ಲದೆ ಪರದಾಡುವಂತಾಗಿದೆ.

ಮಂಗಳೂರಿಗೆ ಪ್ರಯಾಣ ಕಷ್ಟಕರ: ಭಾರೀ ಮಳೆಯಿಂದ ಮಂಗಳೂರು, ಬೆಂಗಳೂರಿನ ಸಂಚಾರವೇ ಅಲ್ಲೋಲ-ಕಲ್ಲೋಲವಾಗಿದೆ. ಯಾಕಂದ್ರೆ ಶಿರಾಡಿ, ಸಂಪಾಜೆ ಘಾಟ್ ಬಂದ್ ಆದ ಮೇಲೆ ಮಂಗಳೂರಿನಿಂದ ಬೆಂಗಳೂರಿಗೆ ಇರೋದು ಚಾರ್ಮಾಡಿ ಮಾರ್ಗವೇ ಬಳಸಬೇಕು. ಆದರೆ ಅಲ್ಲೂ ಭಾರೀ ಮಳೆ, ಗಾಳಿ ಇರೋದ್ರಿಂದ ಗುಡ್ಡ ಕುಸಿದ್ರೆ ಆ ಮಾರ್ಗವೂ ಬಂದ್ ಆಗುತ್ತೆಂದು ಐರಾವತ, ರಾಜಹಂಸ ಹಾಗೂ 08, 10, 12 ಚಕ್ರದ ಗಾಡಿಗಳನ್ನ ಕಳಸ-ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಬಿಡಲಾಗಿತ್ತು. ಆದರೆ ಮಹಾಮಳೆಗೆ ಕುದುರೆಮುಖ ಮಾರ್ಗದಲ್ಲೂ 4 ಗುಡ್ಡ ಕುಸಿದಿದ್ದು ಬೆಂಗಳೂರು-ಮಂಗಳೂರಿಗೆ ಮಾರ್ಗವೇ ಇಲ್ಲದಂತಾಗಿದೆ.

ಇತ್ತ ಕಾವೇರಿ ಹಾಗೂ ಕಪಿಲಾ ನದಿ ಪ್ರವಾಹ ಹಿನ್ನೆಲೆ ಸಂಗಮ ಸ್ಥಳ ಟಿ.ನರಸೀಪುರದಲ್ಲಿ ಹಲವು ಪ್ರದೇಶ ಜಲಾವೃವಾಗಿದೆ. ಟಿ.ನರಸೀಪುರ ಬಳಿಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿದೆ. ಒಟ್ಟಿನಲ್ಲಿ ಮಡಿಕೇರಿ ಮಾತ್ರವಲ್ಲದೇ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರವ ಮಳೆ ಅವಾಂತರವನ್ನೇ ಸೃಷ್ಠಿಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *