ದಾವಣಗೆರೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾದ ಹಿನ್ನೆಲೆಯಲ್ಲಿ ದಾವಣಗೆರೆಯ ಅಭಿಮಾನಿಯೊಬ್ಬ ದೇವರ ಮನೆಯಲ್ಲಿ ವಾಜಪೇಯಿ ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ರು.
ದಾವಣಗೆರೆಯ ಬಿಜೆಪಿ ಕಾರ್ಯಕರ್ತ ಕಡ್ಲೆಬಾಳು ಧನಂಜಯ ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದು, ಚಿಕ್ಕಂದಿನಿಂದಲೂ ವಾಜಪೇಯಿ ಜೀ ಅವರಿಗೆ ಅಪ್ಪಟ ಅಭಿಮಾನಿಯಾಗಿದ್ದಾರೆ. ಇದೀಗ ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖ ಪಟ್ಟಿದ್ದಾರೆ. ಇದರಿಂದ ವಾಜಪೇಯಿಯವರ ಫೋಟೋವನ್ನು ದೇವರ ಫೋಟೋಗಳ ಜೊತೆಗೆ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ವಾಜಪೇಯಿ ಅವರನ್ನು ದೇವರಿಗೆ ಹೋಲಿಸಿ ಪೂಜೆ ಸಲ್ಲಿಸಿ ಅಭಿಮಾನಿಯೊಬ್ಬ ಕೃತಜ್ಞತೆ ಮೆರೆದಿದ್ದಾರೆ.

ಭದ್ರಾವತಿಗೆ ಬಂದಿದ್ದರು ಅಟಲ್ ಜೀ:
ಇಂದಿರಾ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದ ಸಂದರ್ಭದಲ್ಲಿ ವಾಜಪೇಯಿ ಸೋಲು ಅರಗಿಸಿಕೊಳ್ಳದ ಭದ್ರಾವತಿಯ ಲಕ್ಷ್ಮಿನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ರು. ವಿಚಾರ ತಿಳಿದ ಕೂಡಲೇ ವಾಜಪೇಯಿ ಭದ್ರಾವತಿಗೆ ಬಂದು, ಲಕ್ಷ್ಮಿನಾರಾಯಣ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ತಂಗಿ ತಮ್ಮನ ಓದಿಗೂ ನೆರವು ನೀಡಿದ್ದರು. ಅಲ್ಲದೇ ರಾಜ್ಯ ಬಿಜೆಪಿ ನಾಯಕರ ಕಣ್ಣೀರು ಕಂಡು ವಾಜಪೇಯಿ ನ ದೈನ್ಯಂ ನ ಪಲಾಯನಂ ಎಂದಿದ್ದರು.

ದೇಶವೇ ಕಣ್ಣೀರು:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply