ಹೆಬ್ಬುಲಿ ನಾಯಕಿ ಅಮಲಾ ಪೌಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಶೂಟಿಂಗ್ ಮಾಡುತ್ತಿದ್ದ ವೇಳೆ ನಟಿ ಅಮಲಾ ಪೌಲ್ ಅವರ ಕೈಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ಮೂಡಿ ಬರಲಿರುವ `ಅಧೋ ಅಂಧ ಪರವೈ ಪೊಲಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಫ್ ಅಂಡ್ ಟಫ್ ಹುಡುಗಿಯಾಗಿ ಅಮಲಾ ಪೌಲ್ ಕಾಣಿಸಿಕೊಳ್ಳಲಿದ್ದಾರೆ. ಶನಿವಾರ ರಾತ್ರಿ ಈ ಸಿನಿಮಾದಲ್ಲಿ ನಟಿ ಅಮಲಾ ಪೌಲ್ ಅವರ ಸ್ಟಂಟ್ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಪೆಟ್ಟಾಗಿದೆ.

ಅಮಲಾ ಪೌಲ್ ಅವರಿಗೆ ಪೆಟ್ಟಾಗಾದ ಬಲಗೈ ಉಳುಕಿರಬೇಕು ಎಂದು ಚಿತ್ರತಂಡ ಭಾವಿಸಿತ್ತು. ಆದ್ದರಿಂದ ಅವರಿಗೆ ಕೂಡಲೇ ಐಸ್ ಪ್ಯಾಕ್ ನೀಡಲಾಗಿತ್ತು. ನಂತರ ಶೂಟಿಂಗ್ ನಿಲ್ಲಿಸುವುದು ಬೇಡ ಎಂದು ಅಮಲಾ ಪೌಲ್ ಅಂದಿನ ರಾತ್ರಿ ಚಿತ್ರೀಕರಣವನ್ನು ಮುಂದುವರಿಸಿದ್ದರು. ಆದರೆ ಸ್ವಲ್ಪ ಸಮಯ ಕಳೆದಂತೆ ಅಮಲಾ ಪೌಲ್ ಗೆ ಕೈನೋವು ಜಾಸ್ತಿ ಆಗಿದೆ.

ಕೈ ನೋವು ಹೆಚ್ಚಾದ ಪರಿಣಾಮ ತಕ್ಷಣ ಶೂಟಿಂಗ್ ನಿಲ್ಲಿಸಿ ಚಿಕಿತ್ಸೆಗಾಗಿ ಕೊಚ್ಚಿಗೆ ತೆರಳಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಕೈ ಮುರಿದಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಅಮಲಾ ಪೌಲ್ ಕೊಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಲಾ ಪೌಲ್ ಅವರು ಟ್ವೀಟ್ ಮಾಡಿದ್ದಾರೆ.

“ನಿಮ್ಮೆಲ್ಲರ ಪ್ರೀತಿ ಆರೈಕೆಯಿಂದ ನಾನು ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ. ಬಲಗೈಗೆ ಪೆಟ್ಟಾಗಿದ್ದರಿಂದ ಎಡಗೈಯಲ್ಲಿ ಟೈಪ್ ಮಾಡುತ್ತಿದ್ದೇನೆ ಎಂದು ನಟಿ ಅಮಲಾ ಟ್ವೀಟ್ ಮಾಡಿದ್ದಾರೆ.

ಅಮಲಾ ಪೌಲ್ ಸಿನಿಮಾದಲ್ಲಿ ಸ್ಟಂಟ್ ಮಾಡಲು ಸ್ಪೆಷಲ್ ಟ್ರೇನಿಂಗ್ ಪಡೆದುಕೊಂಡಿದ್ದು, ಯಾವುದೇ ಡ್ಯೂಪ್ ಬಳಸದೇ ಸ್ಟಂಟ್ ಗಳನ್ನೂ ನೈಜವಾಗಿ ಮಾಡಿದ್ದರು. ಆದರೆ ಒಂದು ದೃಶ್ಯದಲ್ಲಿ ಮಾತ್ರ ಈ ಅವಘಡ ಸಂಭವಿಸಿದೆ. ನಟಿ ಅಮಲಾ ಪೌಲ್ ಅವರು ಕಿಚ್ಚ ಸುದೀಪ್ ಅಭಿನಯದ `ಹೆಬ್ಬುಲಿ’ ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *