ಬಿಜೆಪಿಯವರಿಗೆ ಹಿಂದೂವಾದಿಗಳು ಬೇಕಾಗಿಲ್ಲ: ಪ್ರಮೋದ್ ಮುತಾಲಿಕ್

ಹಾಸನ: ಬಿಜೆಪಿಯವರಿಗೆ ಹಿಂದೂವಾದಿಗಳು ಬೇಕಾಗಿಲ್ಲ, ಕೇವಲ ಭ್ರಷ್ಟರು, ನೀಚರು ಹಾಗೂ ಕೊಲೆಗಡುಕರು ಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಸದ್ಯದ ರಾಜಕೀಯ ಕುಲಗೆಟ್ಟು ಹೋಗಿದೆ. ಹಿಂದೂಪರ ಪಕ್ಷವೆಂದು ಗುರುತಿಸಿಕೊಂಡಿರುವ ಬಿಜೆಪಿಗೆ ಹಿಂದೂವಾದಿಗಳು ಬೇಕಾಗಿಲ್ಲ. ಕೇವಲ ಅವರಿಗೆ ಎಸ್.ಎಂ.ಕೃಷ್ಣ ಹಾಗೂ ಯೋಗೇಶ್ವರ್ ಅವರಂತಹ ಭ್ರಷ್ಟರು, ನೀಚರು ಹಾಗೂ ಕೊಲೆಗಡುಕರು ಬೇಕಾಗಿದ್ದಾರೆ. ನಮ್ಮಂಥ ಹಿಂದೂವಾದಿಗಳಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ. ಹೀಗಾಗಿ ನಾನು ಯಾವುದೇ ಪಕ್ಷಕ್ಕೂ ಸಹ ಹೋಗುವುದಿಲ್ಲವೆಂದು ಹೇಳಿದ್ದಾರೆ.

ಈ ವೇಳೆ ಮಾಧ್ಯಮಗಳು ಬಸವಣ್ಣ ಹಾಗೂ ವಿವೇಕಾನಂದರ ಸಾವಿನ ಬಗ್ಗೆ ಪ್ರೋ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರ ಪ್ರಸ್ತಾಪಿಸಿದಾಗ, ಬಸವಣ್ಣ ಮತ್ತು ವಿವೇಕಾನಂದರ ಕೊಲೆಯಾಗಿದೆ ಅನ್ನೋದು ಹಾಸ್ಯಾಸ್ಪದ ಹಾಗೂ ಮೂರ್ಖತನದ ಹೇಳಿಕೆ. ಅವರು ಭಗವಾನ್ ಅಲ್ಲ ಸೈತಾನಾಗಿರಬೇಕು, ಹಾಗಾಗಿ ಅಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇಬ್ಬರು ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಅವರು ಶುದ್ಧ ಅಯೋಗ್ಯರು ಎಂದು ಕಿಡಿಕಾರಿದರು.

ನಂತರ ಮಾತನಾಡಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಶ್ರೀರಾಮ ಸೇನೆ ಅಥವಾ ಹಿಂದೂ ಸಂಘಟನೆಗಳ ಯಾವುದೇ ಪಾತ್ರ ಇಲ್ಲ. ಆದರೂ ತನಿಖೆಯ ದಿಕ್ಕನ್ನು ತಪ್ಪಿಸಲಾಗುತ್ತಿದೆ. ಸರ್ಕಾರಕ್ಕೆ ನಿಜವಾದ ಹಂತಕರು ಬೇಕಿಲ್ಲ, ಕೇವಲ ಹಿಂದೂ ಸಂಘಟನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಕ್ಸಲರ ಮೇಲೆ ಸಂಶಯ ಹೊಂದಿದ್ದರೂ, ಆ ನಿಟ್ಟಿನಲ್ಲಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *