ಕುಮಟಾದಲ್ಲಿ ಸಮುದ್ರಪಾಲಾಗಿದ್ದ ಯುವಕನ ಮೃತದೇಹವನ್ನು ಹೊರತೆಗೆದ ನೌಕಾಪಡೆ

ಕಾರವಾರ: ಕುಮಟಾದ ವನ್ನಳ್ಳಿಯಲ್ಲಿ ಸಮುದ್ರಪಾಲಾಗಿದ್ದ ಯುವಕನ ಮೃತದೇಹವನ್ನು ನೌಕಾದಳದ ಹೆಲಿಕಾಪ್ಟರ್ ಸಹಾಯದಿಂದ ಹೊರತೆಗೆಯಲಾಗಿದೆ.

ಆನಂದ ಮೊಗೇರ್ (31) ಆಗಸ್ಟ್ 5 ರಂದು ವನ್ನಳ್ಳಿ ಕಡಲತೀರದಲ್ಲಿ ಬಂಡೆ ಮೇಲಿಂದ ಕಾಲುಜಾರಿ ಸಮುದ್ರದಲ್ಲಿ ಬಿದ್ದಿದ್ದರು. ಮರುದಿನ ಆನಂದ್ ಮೃತದೇಹ ಕಾಲುಜಾರಿ ಬಿದ್ದ ಜಾಗದಲ್ಲೇ ಪತ್ತೆಯಾಗಿತ್ತು. ಆದರೆ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ನೀರಿನ ರಭಸದಿಂದಾಗಿ ಮೃತದೇಹವನ್ನು ದಡಕ್ಕೆ ತರಲು ಸಾಧ್ಯವಾಗಿರಲಿಲ್ಲ.

ಸುಮುದ್ರದಲ್ಲಿ ನೀರಿನ ರಭಸ ಹೆಚ್ಚಾಗಿದ್ದರಿಂದ ನೌಕಾದಳದವರ ಸಹಾಯ ಪಡೆದುಕೊಂಡು, ನುರಿತ ಮುಳುಗು ತಜ್ಞರು ಕೂಡ ಪ್ರಯತ್ನ ಪಟ್ಟಿದ್ದರೂ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸೇನೆಯ ಹೆಲಿಕಾಪ್ಟರ್ ಮೂಲಕ ಕೊನೆಯ ಪ್ರಯತ್ನ ನಡೆಸಿದರು. ಮೃತದೇಹವಿರುವ ಪ್ರದೇಶದ ಬಳಿ ಹೆಲಿಕಾಪ್ಟರ್ ನಿಂದ ಉಂಟಾದ ಗಾಳಿಯ ರಭಸಕ್ಕೆ ಶವ ದಡಕ್ಕೆ ತೇಲಿ ಬರುವಂತೆ ಮಾಡಲಾಯಿತು.

ಸತತ ಮೂರು ದಿನಗಳ ಶತಪ್ರಯತ್ನದಿಂದಾಗಿ ಕೊನೆಗೂ ಕೊಳೆತ ಸ್ಥಿತಿಯಲ್ಲಿ ಮೃತದೇಹವನ್ನು ಸಮುದ್ರದಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *