ಕೆಜಿಎಫ್ ನಲ್ಲಿ ಕರುಣಾನಿಧಿ ಫೋಟೋಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ

ಕೋಲಾರ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಅಧ್ಯಕ್ಷ ಕರುಣಾನಿಧಿ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಜಿಎಫ್ ನಲ್ಲಿ ಕರುಣಾನಿಧಿ ಫೋಟೋಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಕೆಜಿಎಫ್ ನಗರದ ಗಾಂಧಿ ವೃತ್ತದಲ್ಲಿ ಕರುಣಾನಿಧಿ ಅಭಿಮಾನಿಗಳು ಹಾಗೂ ಡಿಎಂಕೆ ಕಾರ್ಯಕರ್ತರು ಈ ರೀತಿ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದ ಬಳಿಕ 10ಕ್ಕೂ ಹೆಚ್ಚು ಜನ ಅಭಿಮಾನಿಗಳು ಚೆನ್ನೈಗೆ ತೆರಳಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಮಿಳುನಾಡು ಗಡಿ ಜಿಲ್ಲೆ ರಾಜ್ಯದಲ್ಲೂ ಖಾಕಿ ಕಟ್ಟೆಚ್ಚರ ವಹಿಸಿದೆ.

ಆಸ್ಪತ್ರೆಯಲ್ಲಿಯೇ ನಿಧನ:
ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು.

ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ.

ಐದು ಬಾರಿ ಮುಖ್ಯಮಂತ್ರಿ:
ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *