ಭಾರತದ ಮಹಿಳೆಯರನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕಿದೆ: ರಾಹುಲ್ ಗಾಂಧಿ

ನವದೆಹಲಿ: ಭಾರತ ಮಾತೆಯ ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನವ ದೆಹಲಿಯಲ್ಲಿ ಕಾಂಗ್ರೆಸ್ ಮಹಿಳಾ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ ಎನ್‍ಡಿಎ ಸರ್ಕಾರದ ವಾಗ್ದಾಳಿ ನಡೆಸಿದರು. ಸದ್ಯ ಬಿಜೆಪಿ ಶಾಸಕರಿಂದಲೇ ನಾವು ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯನ್ನು ಆರಂಭಿಸಬೇಕಿದೆ. ಇದೂವರೆಗೂ ಈ ಯೋಜನೆಗೆ ಓರ್ವ ರಾಯಭಾರಿಯನ್ನು ನೇಮಿಸಲು ಕೇಂದ್ರ ವಿಫಲವಾಗಿದ್ದು, ಒಂದು ಜಿಲ್ಲೆಗೆ ಕೇವಲ 40 ಲಕ್ಷ ರೂ. ಅನುದಾನವನ್ನು ಮಾತ್ರ ಮೀಸಲಿರಿಸಿದೆ ಎಂದು ದೂರಿದರು.

ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಬಿಲ್ ಜಾರಿಗೆ ತರಲು ಸಂಪೂರ್ಣ ಬೆಂಬಲ ನೀಡುತ್ತಿದ್ದರೂ ಸರ್ಕಾರ ಮಹಿಳೆ ಸಮಾನತೆಯ ಕಾಯ್ದೆಯನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ದೇಶವನ್ನು ಕೇವಲ ಪುರುಷರೇ ಮುನ್ನಡೆಸಬೇಕು ಎಂಬುವುದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ದಾಂತವಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿ ಬಂತು. ಎಲ್ಲ ವಿಚಾರಗಳ ಬಗ್ಗೆ ಮಾತನಾಡುವ ಪ್ರಧಾನಿಗಳು ಮಾತ್ರ ಈ ವಿಷಯದಲ್ಲಿ ಮೌನವಾಗಿದ್ದಾರೆ. ಸದ್ಯ ಭಾರತದಲ್ಲಿಯ ಮಹಿಳೆಯರಲ್ಲಿ ಅಭದ್ರತೆ ಕಾಡುತ್ತಿದೆ. ಈ ಹಿಂದೆ 70 ವರ್ಷದಲ್ಲಿ ಎಂದೂ ಈ ರೀತಿಯ ಭಯ ಮೂಡಿರಲಿಲ್ಲ. ಆದ್ರೆ ಎನ್‍ಡಿಎ ಸರ್ಕಾರದ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ದೇಶದ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *