ಟೀಂ ಇಂಡಿಯಾಗೆ ಮಾರಕವಾಗಿದ್ದ ಬೆನ್ ಸ್ಟೋಕ್ಸ್ 2ನೇ ಟೆಸ್ಟ್‌ಗೆ ಅಲಭ್ಯ

ಲಂಡನ್: ಬರ್ಮಿಂಗ್‍ಹ್ಯಾಮ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿಗೆ ಕಾರಣರಾಗಿದ್ದ ಬೆನ್ ಸ್ಟೋಕ್ಸ್ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮದ್ಯ ಸೇವಿಸಿ ಬೀದಿ ಜಗಳದಲ್ಲಿ ಭಾಗಿಯಾಗಿದ್ದ ಆರೋಪ ಪ್ರಕರಣದಲ್ಲಿ ಸ್ಟೋಕ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಸ್ಟೋಕ್ಸ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿದ್ದು 2ನೇ ಟೆಸ್ಟ್ ಪಂದ್ಯಕ್ಕೆ ಅಭ್ಯರಾಗಲಿದ್ದಾರೆ.

ಒಂದೊಮ್ಮೆ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದೂಡಿದರೆ ಸ್ಟೋಕ್ಸ್ ಪಂದ್ಯದಲ್ಲಿ ಭಾಗವಹಿಸಬಹುದಾಗಿದೆ. ಅಂದಹಾಗೇ ಸ್ಟೋಕ್ಸ್ ಬ್ರಿಸ್ಟಾಲ್ ಕ್ರೌನ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಹಾಗೂ 2ನೇ ಇನ್ನಿಂಗ್ಸ್ ನಲ್ಲಿ ಕೊಹ್ಲಿ ವಿಕೆಟ್ ಸೇರಿದಂತೆ 4 ವಿಕೆಟ್ ಪಡೆದು ಮಿಂಚಿದ್ದರು. ಸ್ಟೋಕ್ಸ್ ಅಲಭ್ಯರಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್ ವೋಕ್ಸ್ ಇಂಗ್ಲೆಂಡ್ ಪರ ಆಡಲಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿ 2 ಟೆಸ್ಟ್ ಪಂದ್ಯಕ್ಕೆ ಮತ್ತೊಂದು ಬದಲಾವಣೆ ಮಾಡಲಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮಲಾನ್ ಸ್ಥಾನದಲ್ಲಿ ಆಲಿ ಪೋಪ್ ಆಯ್ಕೆ ಮಾಡಲಾಗಿದೆ. ಕೌಂಟಿ ಕ್ರಿಕೆಟ್ ನಲ್ಲಿ ಸರ್ರೆ ತಂಡದ ಪರ 20 ವರ್ಷದ ಆಲಿ ಪೋಪ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಆಲಿ ಪೋಪ್ 1,012 ರನ್ ಗಳಿಸಿದ್ದಾರೆ. ಅಲ್ಲದೇ ಪಂದ್ಯವೊಂದರಲ್ಲಿ ಅಜೇಯ 158 ರನ್ ಗಳಿಸಿದ ಹೆಗ್ಗಳಿಕೆಯನ್ನ ಪಡೆದಿದ್ದಾರೆ.

ಕ್ರಿಕೆಟ್ ಕಾಶಿ ಲಾಡ್ರ್ಸ್ ಮೈದಾನದಲ್ಲಿ ಆಗಸ್ಟ್ 9 ರಿಂದ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *