ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

ಕಲಬುರಗಿ: ಫ್ರೆಂಡ್‍ಶಿಪ್ ಡೇ ಹಿನ್ನೆಲೆಯಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಈ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಿ, ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ಮೆರೆದಿದೆ.

ಇಂದು ದೇಶದ ಎಲ್ಲೆಡೆ ಫ್ರೆಂಡ್‍ಶಿಪ್ ಡೇ ಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ಸ್ನೇಹಿತರಿಬ್ಬರು ಪರಸ್ಪರ ಬ್ಯಾಂಡ್‍ಗಳನ್ನು ಕಟ್ಟಿ, ಸಿಹಿ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಳ್ಳೊದು ಕಾಮನ್. ಇದನ್ನು ಮೀರಿ ನಮ್ಮ ಸಂಕಲ್ಪ ಫೌಂಡೇಶನ್ ಸದಸ್ಯರು ಸಸಿಗಳನ್ನು ನೆಟ್ಟು ಫ್ರೆಂಡ್‍ಶಿಪ್ ಬ್ಯಾಂಡ್‍ಗಳನ್ನು ಕಟ್ಟಿ ಪರಿಸರ ಸ್ನೇಹವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಿಠಲ ನಗರದ ಹನುಮಾನ ದೇವಸ್ಥಾನದ ಮಹಾನಗರ ಪಾಲಿಕೆ ಉದ್ಯಾನದಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಸ್ನೇಹಿತರ ದಿನಾಚರಣೆ ಆಯೋಜಿಸಿತ್ತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸಸಿಗಳನ್ನು ನೆಟ್ಟು ಅವುಗಳಿಗೆ ನೀರು ಉಣಿಸುವುದರ ಮೂಲಕ ಗಿಡ ಮರಗಳನ್ನ ತಮ್ಮ ಸ್ನೇಹಿತರಂತೆ ನೋಡಿ ಅವುಗಳನ್ನ ಪ್ರತಿಯೊಬ್ಬರ ಪೋಷಿಸುವಂತೆ ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಬಹುತೇಕರು ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಸ್ವಚ್ಛಂದವಾಗಿ ಉಸಿರಾಡಲು ಕಷ್ಟವಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ‘ನಮ್ಮ ಸಂಕಲ್ಪ ಫೌಂಡೇಶನ್’ ರಕ್ತ ದಾನಿಗಳ ಗುಂಪಾಗಿದ್ದು, ಕಲಬುರಗಿ ಸೇರಿದಂತೆ ವಿವಿಧೆಡೆ ಉಚಿತವಾಗಿ ರಕ್ತವನ್ನು ದಾನ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಬಳಿಕ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅವುಗಳಿಗೆ ಬ್ಯಾಂಡ್‍ಗಳನ್ನು ಕಟ್ಟಲಾಯಿತು.

Comments

Leave a Reply

Your email address will not be published. Required fields are marked *