ಉದ್ಯಮಿಗಳ ಕಗ್ಗೊಲೆ ಕೇಸ್- ಬಿಜೆಪಿ ಮುಖಂಡರ ಜೊತೆಗಿದ್ದ ಆರೋಪಿ ಫೋಟೋ ವೈರಲ್!

ಬೆಂಗಳೂರು: ಇಬ್ಬರು ಉದ್ಯಮಿಗಳನ್ನು ಕಗ್ಗೊಲೆಗೈದ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಕೊಲೆಗಡುಕ ಆರೋಪಿ ಬೆಂಗಳೂರಿನ ಯುವ ಬಿಜೆಪಿ ಮುಖಂಡನೆಂದು ತಿಳಿದುಬಂದಿದೆ.

ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯನಾಗಿದ್ದ ಬಂಧಿತ ಆರೋಪಿ ತೇಜಸ್, ಮಾಜಿ ಮೇಯರ್ ಎಸ್ ಕೆ ನಟರಾಜು, ಮಾಜಿ ಡಿಸಿಎಂ ಆರ್ ಅಶೋಕ್ ಜೊತೆಗೂ ಗುರುತಿಸಿಕೊಂಡಿದ್ದನು. ಇದೀಗ ಆರೋಪಿ ಆರ್ ಅಶೋಕ್ ಜೊತೆಯಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಪೊಲೀಸರು ತೇಜಸ್ ನನ್ನು ವಿಚಾರಣೆಗೆ ಕರೆದ ಸಮಯದಲ್ಲಿ ಬಿಜೆಪಿ ನಾಯಕರುಗಳ ಜೊತೆ ತೆರಳುತ್ತಿದ್ದನು. ಅಲ್ಲದೇ ಮೂರ್ನಾಲ್ಕು ಬಾರಿ ಎಸ್.ಕೆ ನಟರಾಜು ಅರೋಪಿ ಜೊತೆ ಪೊಲೀಸ್ ಠಾಣೆಗೆ ತೆರಳಿದ್ದನೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಏನಿದು ಪ್ರಕರಣ?:
ಕಳೆದ ಜೂನ್ 27ರಂದು ಉದ್ಯಮಿ ಪ್ರಸಾದ್ ಬಾಬು ಅವರನ್ನು ಆರ್ ಆರ್ ನಗರದಲ್ಲಿ ಹಾಗೂ ಇನ್ನೊಬ್ಬ ಉದ್ಯಮಿ ಬಾಲಾಜಿ ಅವರನ್ನು ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಈ ಇಬ್ಬರು ಉದ್ಯಮಿಗಳನ್ನು ಕೂಡ ಸುಪಾರಿ ಪಡೆದು ಒಂದೇ ತಂಡ ಅಪಹರಣ ಮಾಡಿದ್ದು, ಅಲ್ಲದೇ ಇಬ್ಬರನ್ನೂ ಕೂಡ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಜಯನಗರ ಎಸಿಪಿ ನೇತೃತ್ವದಲ್ಲಿ ಕೊಲೆ ಮಾಡಿದ್ದ ತೇಜಸ್, ಮಣಿ ಹಾಗೂ ಅನಿಲ್ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ಗಿರಿನಗರ ಪೊಲೀಸ್ ಠಾಣೆಗೆ ಕರೆದೊಯ್ದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ನೃತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *