ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ರಣತಂತ್ರ ರೂಪಿಸುತ್ತಿದ್ದು, ಈಗಾಗಲೆ 7 ಮತಕ್ಷೇತ್ರಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಶುಕ್ರವಾರ ರಾಜ್ಯದ 7 ಲೋಕಸಭಾ ಕ್ಷೇತ್ರಗಳ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಲಾಗಿದ್ದು, ಪಕ್ಷ ಸಂಘಟನೆ, ವಿಧಾನಸಭೆ ಸೋಲು ಗೆಲುವುಗಳ ಚರ್ಚೆ ಮಾಡಲಾಗಿದೆ. ಮುಂದಿನ ವಾರ ಉಳಿದ 21 ಮತಕ್ಷೇತ್ರಗಳ ಮುಖಂಡರ ಸಭೆ ನಿಗದಿ ಪಡಿಸಲಾಗಿದೆ. ಆದರೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣಾ ಮೈತ್ರಿ ಕುರಿತಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆಗೆ ಚರ್ಚೆ ಬಳಿಕ, ಮೈತ್ರಿಯ ನಿರ್ಧಾರ ಎಂದ ಅವರು, ಆಷಾಢ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಆಗಸ್ಟ್ 15ರ ನಂತರ ದೆಹಲಿಗೆ ತೆರಳಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ಅಧ್ಯಕ್ಷನಾಗಿ ನೇಮಕಗೊಂಡ ಬಳಿಕ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿಲ್ಲ. ಹೀಗಾಗಿ ಇಂದು ಸಂಜೆ ಅವರ ನಿವಾಸಕ್ಕೆ ಹೋಗುತ್ತಿರುವೆ. ಈ ವೇಳೆ ಅವರೊಂದಿಗೆ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply