ಲೈವ್ ಸೂಸೈಡ್ -2 ಸಾವಿರ ಮಂದಿ ವಿಡಿಯೋ ನೋಡಿ ಸುಮ್ಮನಿದ್ದರು!

ಗುರುಗ್ರಾಮ: ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಹರ್ಯಾಣದ ವ್ಯಕ್ತಿಯೊಬ್ಬ ಫೇಸ್‍ಬುಕ್ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಫೇಸ್‍ಬುಕ್ ಲೈವ್ ಮಾಡಿದ್ದ ಹರ್ಯಾಣದ ಅಮಿತ್ ಚೌಹಣ್ (27) ಎಂಬಾತ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಈ ವಿಡಿಯೋ ಶೇರ್ ಮಾಡಿ ಎಂದು ಮನವಿ ಮಾಡಿದ್ದ. ಬಳಿಕ ಈ ವಿಡಿಯೋವನ್ನು ಸುಮಾರು 2 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ. ಆದರೆ ಯಾರು ಈ ಕುರಿತು ಮಾಹಿತಿ ನೀಡದೆ ಸುಮ್ಮನಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಹಾಗೇ ಅಮಿತ್ ಚೌಹಣ್ ಹರ್ಯಾಣದ ಜಟೋಲಿ ಪ್ರದೇಶದ ನಿವಾಸಿಯಾಗಿದ್ದು, ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದ. ಇದರಂತೆ ಮಂಗಳವಾರ ಸಂಜೆ ಪತ್ನಿಯೊಂದಿಗೆ ಜಗಳವಾಡಿದ್ದ ಅಮಿತ್ 7 ಗಂಟೆ ಸಮಯದಲ್ಲಿ ಪತ್ನಿ ಮನೆಯಿಂದ ಹೊರ ಹೋಗಿದ್ದ ವೇಳೆ ಫೇಸ್‍ಬುಕ್ ಲೈವ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಮರುದಿನ ಗ್ರಾಮಸ್ಥರೊಬ್ಬರು ನೀಡಿದ ಮಾಹಿತಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದ ಕುರಿತು ಮಾಹಿತಿ ಪಡೆದಿದ್ದರು. ಆದರೆ ಈ ವೇಳೆಗಾಗಲೇ ಚೌಹಣ್ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಅಮಿತ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, 6 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಎಂದು ಸಂಬಂಧಿಗಳು ತಿಳಿಸಿದ್ದರು.

ಗ್ರಾಮಸ್ಥರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಅಮಿತ್ ಆತ್ಮಹತ್ಯೆಗೂ ಮುನ್ನ ಫೇಸ್‍ಬುಕ್ ಲೈವ್ ಮಾಡಿದ್ದ ಹಾಗೂ ಈ ವಿಡಿಯೋವನ್ನು 2 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದ ವಿಚಾರ ತಿಳಿದು ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಸುಮಿತ್ ಕುಹಾರ್, ಮೃತ ಅಮಿತ್ ಪತ್ನಿ ರಾತ್ರಿ 10 ಗಂಟೆ ವೇಳೆಗೆ ಮನೆಗೆ ಹಿಂದಿರುಗಿದ ಸಂದರ್ಭದಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ನೆರೆಹೊರೆಯವರ ಸಹಾಯ ಪಡೆದು ಮೃತದೇಹದ ಅಂತಿಮ ಕಾರ್ಯ ನಡೆಸಲು ಸಿದ್ಧತೆ ನಡೆಸಿದ್ದರು. ಮೃತನ ಕುಟುಂಬಸ್ಥರು ಯಾವುದೇ ದೂರು ನೀಡದ ಕಾರಣ ಸ್ವಯಂ ದೂರು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *