ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಕಿರಿಕ್ ಬೆಡಗಿ!

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನ ‘ಗೀತಾ ಗೋವಿಂದಂ’ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ಪೋಸ್ಟರ್ ನೋಡಿ ಟ್ರೋಲ್ ಮಾಡಿದವರಿಗೆ ರಶ್ಮಿಕಾ ಖಡಕ್ ಉತ್ತರ ನೀಡಿದ್ದಾರೆ.

ಜುಲೈ 19ರಂದು ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ಪೋಸ್ಟ್ ಮಾಡಿದ್ದರು. ನಟ ವಿಜಯ್ ದೇವರಕೊಂಡ ರಶ್ಮಿಕಾರನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡಿರುವ ಪೋಸ್ಟರ್ ನೋಡಿ ಅಭಿಮಾನಿಗಳು ರಶ್ಮಿಕಾರನ್ನು ಟ್ರೋಲ್ ಮಾಡಲು ಶುರು ಮಾಡಿದರು.

ರಶ್ಮಿಕಾ ನಿಮಗೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿದೆ. ನೀವು ಈ ರೀತಿಯ ಸಿನಿಮಾ ಮಾಡಿ ರಕ್ಷಿತ್ ಅವರ ಹೆಸರನ್ನು ಹಾಳು ಮಾಡಬಾರದು. ನೀವು ಈ ರೀತಿಯ ಸಿನಿಮಾ ಮಾಡಿದರೆ ರಕ್ಷಿತ್ ಶೆಟ್ಟಿ ಅವರ ಮರ್ಯಾದೆ ಹೋಗುತ್ತದೆ ಎಂದು ನೆಗೆಟೀವ್ ಕಮೆಂಟ್ ಮಾಡಿದ್ದಾರೆ.

ಈ ಕಮೆಂಟ್ಸ್ ಗೆ ಪ್ರತಿಕ್ರಿಯಿಸಿದ ರಶ್ಮಿಕಾ, “ನಾನು ರಕ್ಷಿತ್ ರನ್ನು ಪ್ರೀತಿಸುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ನೀವು ಕಮೆಂಟ್ ಮಾಡುವುದು ಸರಿಯಲ್ಲ. ನಾನು ಈ ರೀತಿ ಕೆಟ್ಟದಾಗಿ ಮಾತನಾಡುತ್ತಿರುವುದ್ದಕ್ಕೆ ಕ್ಷಮೆ ಕೇಳುತ್ತೇನೆ. ಏಕೆಂದರೆ ನಾವು ಸಿನಿಮಾ ಕಲಾವಿದರು. ನೀವು ಬೇಕಿದ್ದರೆ ನಮ್ಮ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿ ನಾನೇನು ಹೇಳುವುದಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದಾರೆ.

“ವಿಜಯ್ ನನ್ನ ಆತ್ಮೀಯ ಗೆಳೆಯನಾಗಿದ್ದು, ಇದು ಕೂಡ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ವಿಷಯ. ನಮ್ಮ ಚಿತ್ರತಂಡದ ಗೆಳೆಯರು ನಮಗೆ ಈ ಫೋಟೋಗಳನ್ನು ಪೋಸ್ಟ್ ಮಾಡಲು ಹೇಳುತ್ತಾರೆ. ಹಾಗಾಗಿ ನಾವು ಈ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇವೆ. ನಿಮಗೆ ಈ ಪೋಸ್ಟ್ ಇಷ್ಟವಾಗಿಲ್ಲ ಎಂದರೆ ಅದನ್ನು ಬಿಟ್ಟುಬಿಡಿ”- ನಿಮ್ಮ ಪ್ರೀತಿಯ ರಶ್ಮಿಕಾ ಎಂದು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಗೀತಾ ಗೋವಿಂದಂ ಚಿತ್ರವನ್ನು ಪರಶುರಾಮ್ ನಿರ್ದೇಶನ ಮಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಈ ಸಿನಿಮಾ ರಶ್ಮಿಕಾ ಅವರ ಎರಡನೇ ತೆಲುಗು ಸಿನಿಮಾ ಆಗಿದ್ದು, ಇದೇ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *