ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

ಬೆಂಗಳೂರು: ಮೊದಲ ಹಂತದ ಮಂತ್ರಿ ಸ್ಥಾನ ಹಂಚಿಕೆ, ಬಜೆಟ್ ಮುಗಿತು, ಈಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಗೆ ಸಂಬಂಧಸಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಬುಗಿಲೆದ್ದಿದ್ದು, ವಿಧಾನಸಭೆಯ ಚುನಾವಣೆಯ ಪೈಪೋಟಿಯ ಕಾವು ಮತ್ತೆ ಮರುಕಳಿಸಿದೆ.

ಮಂಗಳವಾರ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರಂತೆ.

ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಂಡದ ಯೋಜನೆಯಂತೆಯೇ ಜಿಲ್ಲಾ ಉಸ್ತುವಾರಿ ನೇಮಕ ನಡೆದಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತಕ್ಷೇತ್ರದಿಂದ ಭಾರೀ ಪೈಪೋಟಿ ನೀಡಿ, ಜಯಗಳಿಸಿದ್ದ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಅಸಮಾಧಾನದ ಹೊಗೆ ಇನ್ನು ಶಮನಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿಯೂ ಇಬ್ಬರ ನಾಯಕರ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ಈಗ ಮೈಸೂರು ಜಿಲ್ಲಾ ಉಸ್ತುವಾರಿಯೂ ಜಿ.ಟಿ.ದೇವೇಗೌಡರು ಅಂದು ಕೊಂಡಂತೆ ಆಗಿದೆ.

ತಮ್ಮ ಆಪ್ತ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕೊಟ್ಟಿರೋದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯವರ ಮಾತನ್ನೇ ಕೇಳುತ್ತಿಲ್ಲವಂತೆ. ಈಗ ಜಿಲ್ಲಾ ಉಸ್ತವಾರಿ ನೇಮಕದ ನಡೆ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಿಕೆ ಅಸಮಾಧಾನಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *