ಕೊಪ್ಪಳ: ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸಿ, ಪ್ರತ್ಯೇಕಗೊಳಿಸುವುದು ಸರಿಯಲ್ಲ ಎಂದು ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ನಡೆಯುತ್ತಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಹಾಸ್ಯ ರೂಪದಲ್ಲಿ ತಮ್ಮ ಭಾಷಣದಲ್ಲಿ ಪ್ರಾಣೇಶ ಪ್ರತಿಕ್ರಿಯೆ ನೀಡಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕೇಕ್ ಉದಾಹರಣೆಯನ್ನು ತೆಗೆದುಕೊಂಡು, ರಾಜ್ಯವನ್ನು ಕೇಕ್ ನಂತೆ ಕತ್ತರಿಸಿ, ಪ್ರತ್ಯೇಕಗೊಳಿಸುವುದು ಸರಿಯಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ, ಅಖಂಡ ಕರ್ನಾಟಕವಿದ್ದರೆ ರಾಜ್ಯಕ್ಕೆ ಗೌರವ. ಪ್ರತ್ಯೇಕ ರಾಜ್ಯಕ್ಕಿಂತ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಮನಮುಟ್ಟುವಂತೆ ತಿಳಿಸೋಣ ಜೊತೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಪ್ರತ್ಯೇಕ ರಾಜ್ಯಕ್ಕಿಂತ ಇಲ್ಲಿನ ಸಮಸ್ಯೆಗಳ ಪರಿಹಾರದ ಹಾದಿ ಹುಡುಕೋಣ. ಈ ಹಿಂದೆ ಮಹದಾಯಿ ಯೋಜನೆ ಹೋರಾಟ ನಡೆಯುವಾಗ ರೈತರನ್ನು ನಗಿಸುವ ಕೆಲಸ ಮಾಡಿದ್ದೇವೆ. ತುಂಗಭದ್ರಾ ಹೂಳು ತೆಗೆಯುವಾಗ ನಮ್ಮ ಹಾಸ್ಯ ತಂಡ ಭೇಟಿ ನೀಡಿ ಧನ ಸಹಾಯ ಕೂಡ ಮಾಡಿತ್ತು ಎಂದು ನೆನಪಿಸಿಕೊಂಡರು.
ನಾವು ಉತ್ತರ ಕರ್ನಾಟಕದ ಭಾಷೆ ಬಳಸಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದೇವೆ. ಹೀಗಾಗಿ ಪ್ರತ್ಯೇಕ ರಾಜ್ಯ ಮಾಡಿದರೆ ಅವರು ನಮ್ಮನ್ನು ಆಹ್ವಾನಿಸುವುದಿಲ್ಲ ಎಂದು ಈ ವೇಳೆ ಹಾಸ್ಯ ಚಟಾಕಿ ಹಾರಿಸಿದರು.

Leave a Reply