ಎಚ್‍ಡಿಕೆ ತಾರತಮ್ಯ ಮುಂದುವರಿಸಿದರೆ ಪ್ರತ್ಯೇಕ ರಾಜ್ಯದ ಹೋರಾಟ ಬೆಂಬಲಿಸುವ ಅಗತ್ಯವಿದೆ: ಬಿಜೆಪಿ ಶಾಸಕ

ಹಾವೇರಿ: ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗಕ್ಕೆ ಹಣ ನೀಡಿಲ್ಲ ಎಂದು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ ಪ್ರತ್ಯೇಕ ರಾಜ್ಯದ ಕೂಗಿಗೆ ಧ್ವನಿಗೂಡಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಉತ್ತರಕರ್ನಾಟಕ್ಕೆ ಆಗುವ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯದ ಹೋರಾಟದ ಕೂಗು ಬಲಗೊಳ್ಳುತ್ತದೆ. ಅಲ್ಲದೇ ಜಿಲ್ಲೆಗೆ ಬಿಜೆಪಿ ಸರ್ಕಾರ ಇದ್ದಾಗ ಮೆಡಿಕಲ್ ಕಾಲೇಜು ಮಂಜೂರು ಮಾಡಿತ್ತು. ಸದ್ಯ ಕಾಲೇಜು ಆರಂಭಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತೆರಿಗೆ ಸಂಗ್ರಹಿಸಲಾಗುತ್ತದೆ. ಈ ಹಣವನ್ನು ಕೇವಲ ಒಂದು ಅಥವಾ ಎರಡು ಜಿಲ್ಲೆಗಳಿಗೆ ನೀಡುವುದು ಸರಿಯಲ್ಲ. ಉತ್ತರ ಕರ್ನಾಟಕ ಮಂದಿಗೆ ಈ ಕುರಿತು ತೀವ್ರ ಅಸಮಾಧಾನವಿದೆ. ಶಾಸಕರೇ ನೇರ ಮನವಿ ಮಾಡಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ಅದ್ದರಿಂದ ಈ ವೇಳೆ ಪ್ರತೇಕ ರಾಜ್ಯ ಆಗುವುದು ಅವಶ್ಯಕವಾಗಿದೆ ಎಂದು ಅನಿಸುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುತ್ತದೆ. ಅಲ್ಲದೇ ಆಗಸ್ಟ್ 2ರ ಬಂದ್‍ಗೆ ನಾವು ಬೆಂಬಲ ನೀಡಬೇಕಿದೆ. ತಾರತಮ್ಯದ ವಿರುದ್ಧ ಕಠಿಣ ಪ್ರತಿಭಟನೆ ಅಗತ್ಯವಿದೆ ಎಂದರು.

ಇದೇ ವೇಳೆ ಸಿಎಂ ಹೇಳಿಕೆ ವಿರುದ್ಧ ಕಿಡಿಕಾರಿದ ಶಾಸಕರು, ಉತ್ತರ ಕರ್ನಾಟಕದ ಜನರು ಮತ ಹಾಕಿಲ್ಲ. ಇವರು ಮತ ಹಾಕಿಲ್ಲ ಎಂದು ಹೇಳುವುದು ಸರಿಯಲ್ಲ. ಅಖಂಡ ಕರ್ನಾಟಕ ನಮಗೂ ಬೇಕು. ಆದರೆ ಅಭಿವೃದ್ಧಿಗಾಗಿ ಹೆಚ್ಚು ಹಣ ನೀಡುತ್ತಿಲ್ಲ. ಈ ರೀತಿ ಕಡೆಗಣಿಸಿದ್ದರಿಂದ ನಾವು ಶಾಸಕರಾಗಿ ಅವರೊಂದಿಗೆ ಇದ್ದು ಏನು ಪ್ರಯೋಜನ? ಪ್ರತ್ಯೇಕ ರಾಜ್ಯ ಹೋರಾಟದ ಕೂಗು ಮೊಳಗಲು ಸಿಎಂ ಕುಮಾರಸ್ವಾಮಿ ಕಾರಣ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *