ಹಸಿರು ಶಾಲು ಹಾಕಿದವರೆಲ್ಲ ರೈತರಲ್ಲ- ಡಿ.ಕೆ ಶಿವಕುಮಾರ್ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಹಸಿರು ಶಾಲು ಹಾಕಿದವರೆಲ್ಲ ರೈತರಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ವಿವಾದಾತ್ಮಕ ಹೇಳಿಕೆಯನ್ನು ಹೇಳಿದ್ದಾರೆ.

ಬಿಜೆಪಿ ಪಾದಯಾತ್ರೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನಮ್ಮ ಸರ್ಕಾರವನ್ನು ಹಳದಿ ಕಣ್ಣಿನಲ್ಲಿ ನೋಡುತ್ತಿದ್ದಾರೆ. ಈ ಸರ್ಕಾರದ ಯಶಸ್ಸಿನ ಕಾರ್ಯಕ್ರಮವನ್ನು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಾವು ಸಾವಿರಾರು ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದೇವೆ. ಈಗಾಗಲೇ 40,000 ಕೋಟಿ ರೂ.ವನ್ನು ಕೊಟ್ಟಿದ್ದೇವೆ. ಆದ್ದರಿಂದ ಅವರಿಗೆ ಇದನ್ನು ಡೈಜೆಸ್ಟ್ ಮಾಡಿಕೊಳ್ಳೋಕೆ ಆಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ:  ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

ಇಂದು ಬ್ಯಾಂಕರ್ಸ್ ಜೊತೆಯೂ ಮಾತನಾಡಿದ್ದೇವೆ. ಅದನ್ನು ಅವರ ಕೈಯಲ್ಲಿ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಅಸೆಂಬ್ಲಿಯಲ್ಲಿ ಯಡಿಯೂರಪ್ಪ ಅವರು, ಯಾವ ಬ್ಯಾಂಕ್ ಅವರು ಅಷ್ಟು ಗ್ಯಾರಂಟಿಯ ಮೇಲೆ ಸಾಲ ಕೊಡುತ್ತಾರೆ ಎಂದು ಕೇಳುತ್ತಿದ್ದರು. ಜೊತೆಗೆ ಬ್ಯಾಂಕ್ ಅವರ ಜೊತೆ ಅವರು ಮಾತನಾಡಿ ಇದು ಯಶಸ್ವಿಯಾಗುತ್ತಿದೆ ಎಂದು ತಿಳಿದ ಮೇಲೆ ಜನರನ್ನು ತಪ್ಪು ದಾರಿಗೆ ಎಳೆದುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಹಸಿರು ಶಾಲು ಹಾಕಿಕೊಂಡವರೆಲ್ಲ ರೈತರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಜೆಟ್ ಆಗಿ ಇನ್ನು ಒಂದು ತಿಂಗಳಾಗಿಲ್ಲ. ರೈತರು ಸದ್ಯಕ್ಕೆ ಖುಷಿಯಲ್ಲಿದ್ದಾರೆ. ಇದನ್ನ ತಪ್ಪಿಸಲು ರೈತರಿಗೆ ವಿಷದ ಬೀಜ ಬಿತ್ತುತ್ತಿದ್ದಾರೆ. ಇದು ಇಡೀ ನಮ್ಮ ರಾಜ್ಯ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅತೀ ದೊಡ್ಡ ಮಾರಕ ಅಂತ ಆಕ್ರೋಶದಿಂದ ಹೇಳಿದ್ದಾರೆ.

ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ರಾಮನಗರದಿಂದ ಈ ಪಾದಯಾತ್ರೆ ಆರಂಭವಾಗಿದ್ದು, ಇಂದು ಬೆಂಗಳೂರಿಗೆ ಆಗಮನವಾಗಿದೆ. ಬಿಜೆಪಿ ಹಾಗೂ ರೈತ ಸಂಘಟನೆ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಕೆಂಗೇರಿಯ ಬಂಡೆ ಮಠದಿಂದ ಪಾದಯಾತ್ರೆ ಪ್ರಾರಂಭವಾಗಿ ಮಧ್ಯಾಹ್ನ ಫ್ರೀಡಂ ಪಾರ್ಕ್ ನಲ್ಲಿ ಪಾದಯಾತ್ರೆ ಅಂತ್ಯವಾಗಿದೆ. ಈ ಪಾದಯಾತ್ರೆಯಲ್ಲಿ ನೂರಾರು ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Comments

Leave a Reply

Your email address will not be published. Required fields are marked *