ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

ಬೆಂಗಳೂರು: ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿ ಸೂಪರ್ ಹಿಟ್ ಆಗಿದ್ದ ಕ್ವೀನ್ ಚಿತ್ರ ಕನ್ನಡದಲ್ಲಿ ‘ಬಟರ್ ಫ್ಲೈ’ ಆಗಿ ಅವತಾರವೆತ್ತುತ್ತಿದೆ. ಯಾವ ಕಥೆಯನ್ನಾದರೂ ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ಒಗ್ಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರೋ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಈ ಚಿತ್ರ ರೆಡಿಯಾಗುತ್ತಿದೆ.

ಚಿತ್ರೀಕರಣವನ್ನು ಅಂದುಕೊಂಡಂತೆಯೇ ಸುಸೂತ್ರವಾಗಿ ನಡೆಸುತ್ತಿದ್ದರೂ ರಮೇಶ್ ಅವರವಿಂದ್ ಅವರನ್ನು ಭಾರೀ ಚಿಂತೆಗೀಡು ಮಾಡಿದ್ದದ್ದು ವಿಶೇಷವಾದ ಒಂದು ಹಾಡು. ಮೂಲ ಚಿತ್ರ ಕ್ವೀನ್‍ನಲ್ಲಿ ಹಿಂದಿಯ ಹಳೆಯ ಹಾಡೊಂದನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿತ್ತು. ಆ ಹಾಡು ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿಯೂ ಕೂಡಾ ಈ ಹಾಡನ್ನು ಅದೇ ರೀತಿ ರೂಪಿಸೋ ಕನಸು ಹೊಂದಿದ್ದ ರಮೇಶ್ ಅವರನ್ನು ಬಹು ದಿನದಿಂದಲೂ ಯಾವ ಗೀತೆಯನ್ನು ಆಯ್ಕೆ ಮಾಡಿಕೊಳ್ಳೋದೆಂಬ ಗೊಂದಲ ಕಾಡುತ್ತಿತ್ತಂತೆ. ಕಡೆಗೂ ಅವರು ಇದಕ್ಕಾಗಿ ಪ್ರಸಿದ್ಧ ರಂಗಗೀತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅದು ದೇವದಾಸಿ ನಾಟಕಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆ. ಸುಖವೀವ ಸುರಪಾನವಿದೇ ಸ್ವರ್ಗಸಮಾನನಂ ಎಂಬ ರಂಗಗೀತೆಯನ್ನು ರಮೇಶ್ ಅರವಿಂದ್ ಈ ಚಿತ್ರಕ್ಕೆ ಹೊಸಾ ಥರದಲ್ಲಿ ಬಳಸಿಕೊಂಡಿದ್ದಾರೆ. ಇದಕ್ಕೆ ಕೇವಲ ಅರ್ಧ ದಿನದಲ್ಲಿಯೇ ಕೊರಿಯೋಗ್ರಫಿ ಮಾಡಿರೋ ಗಣೇಶ್ ಆಚಾರ್ಯ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಈ ವಿಶೇಷವಾದ ಹಾಡಿಗೆ ಕುಣಿದಿರುವ ಪಾರುಲ್ ಕೂಡಾ ಇದನ್ನೊಂದು ಗ್ರೇಟ್ ಎಕ್ಸ್ ಪೀರಿಯನ್ಸ್ ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಸದಾ ಹೊಸತೇನನ್ನೋ ಸೃಷ್ಟಿಸಲು ಹಂಬಲಿಸುವ ರಮೇಶ್ ಅರವಿಂದ್ ಅವರು ತಮ್ಮ ಚಿತ್ರಕ್ಕೆ ರಂಗಗೀತೆಯೊಂದನ್ನು ಆರಿಸಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ.

Comments

Leave a Reply

Your email address will not be published. Required fields are marked *