ಬೆಂಗ್ಳೂರಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್- ಬ್ಲೂವೆಲ್‍ಗೆ ಬಲಿ?

ಬೆಂಗಳೂರು: ಸಿಲಿಕಾನ್ ಸಿಟಿಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಬಾಲಕ ಬ್ಲೂವೆಲ್ ನಂತಹ ಟಾಸ್ಕ್ ಗೆ ಬಲಿಯಾಗಿದ್ದಾನಾ ಎನ್ನುವ ಶಂಕೆ ಈಗ ಮೂಡಿದೆ.

ಬೆಂಗಳೂರು ಶಾಲೆಯೊಂದರಲ್ಲಿ ಓದುತ್ತಿದ್ದ ಯಶ್ವಂತ್ ಸಾಯಿ ಸಾವಿನ ಬಳಿಕ ಪೊಲೀಸರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಡೈರಿಯೊಂದು ಸಿಕ್ಕಿದೆ. ಅದರಲ್ಲಿ ಯಾವುದೋ ಟಾಸ್ಕ್ ಗಾಗಿ ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದನು ಎನ್ನಲಾಗಿದೆ. ಡೈರಿಯಲ್ಲಿ ಬರದಿರೋ ಟಾಸ್ಕ್ ಬಗ್ಗೆ ಅನುಮಾನ ಮೂಡಿಸಿದ್ದು, 2018ರ ಜುಲೈ 24 ರಂದು ನಾನು ಉಡುಪಿಗೆ ಹೋಗುತ್ತೇನೆ ಅಲ್ಲಿ ಕೆಲಸ ಮಾಡುತ್ತೇನೆ ಎಂದು ಜವನರಿ 1ರಂದು ಬರೆದಿದ್ದಾನೆ.

ದೂರವಾಣಿ ನಗರದ ಐಟಿಐ ವಿದ್ಯಾಮಂದಿರ್ ಶಾಲೆಯಲ್ಲಿ ಓದುತ್ತಿದ್ದ ಯಶ್ವಂತ್ ಮನೆಯಿಂದ ಹೊರಡುವಾಗ ಚೀಟಿ ಬರೆದಿದ್ದು, ಅದರಲ್ಲಿ ಮಂಗಳೂರು ಅಡ್ವೆಂಚರ್ ಟ್ರಿಪ್ ಗೆ ಹೋಗುತ್ತಿರುವುದಾಗಿ ಉಲ್ಲೇಖಿಸಿದ್ದ. ಇದೀಗ ಡೈರಿ ಬರಹದಿಂದಾಗಿ ಬಾಲಕ ಬ್ಲೂವೇಲ್ ಗೆ ಬಲಿಯಾದನೇ ಎಂಬ ಶಂಕೆಯೊಂದು ಮೂಡಿದೆ.

ಘಟನೆ ವಿವರ?:
ಬೆಂಗಳೂರಿನ ಐಟಿಐ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿ ಯಶವಂತ್ ಸಾಯಿ(15) ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದನು. ಬೆಂಗಳೂರಿನ ಹೂಡಿ ಮುನಿಸ್ವಾಮಿ ಶೆಟ್ಟಿ ಬಡಾವಣೆ ನಿವಾಸಿ ಎನ್.ವಿ. ಪ್ರೇಮಕುಮಾರ್ ಅವರ ಪುತ್ರನಾಗಿದ್ದು, ಮಂಗಳವಾರ ಯಶವಂತ್ ಅಜ್ಜ ಶಾಲೆಗೆ ಕಳುಹಿಸಲು ಕರೆ ತಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದರು. ಆ ಬಳಿಕ ವಿದ್ಯಾರ್ಥಿ, ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಶ್ವಂತ್ ಸಾಯಿ ನಾಪತ್ತೆಯಾಗಿರುವುದು ಗೊತ್ತಾಗುತ್ತಿದ್ದಂತೆ ಆತನ ಕುಟುಂಬದವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇತ್ತ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಬಳಿ ಬುಧವಾರ ಸಂಜೆ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದಾಗ ಬಾಲಕನ ಶವ ಪತ್ತೆಯಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ತೆಗೆದುಕೊಂಡಿದ್ದ 372 ರೂ. ಟಿಕೆಟ್ ಮತ್ತು ಬೆಳ್ತಂಗಡಿಯಿಂದ ಕಾರ್ಕಳಕ್ಕೆ ತೆರಳಲು ಮಾಡಿದ್ದ 53 ರೂ. ಟಿಕೆಟ್ ಕೂಡಾ ಬ್ಯಾಗಿನಲ್ಲಿ ಪತ್ತೆಯಾಗಿತ್ತು.

Comments

Leave a Reply

Your email address will not be published. Required fields are marked *