ಚಂಡೀಗಢ್: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ಚಿಲ್ಲರೆ ರೂಪದಲ್ಲಿ ನೀಡಿದ್ದು, ಅವುಗಳನ್ನು ಏಣಿಕೆ ಮಾಡಲಾಗದೆ ಕೋರ್ಟ್ ಪ್ರಕರಣವನ್ನು ಮುಂದೂಡಿದೆ.
2015 ರಲ್ಲಿ ವಿಚ್ಛೇದನ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪತ್ನಿಗೆ ಪ್ರತಿ ತಿಂಗಳು 25 ಸಾವಿರ ರೂ. ನೀಡುವಂತೆ ಪತಿಗೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಪತಿ ಪ್ರತಿ ತಿಂಗಳು ಜೀವನಾಂಶ ನೀಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ 50 ಸಾವಿರ ರೂ. ನೀಡಿರಲಿಲ್ಲ. ಇದರಿಂದಾಗಿ ಪತ್ನಿಯು ಹೈಕೋರ್ಟ್ ಮೆಟ್ಟಿಲೇರಿದ್ದಳು.
ಹೈಕೋರ್ಟ್ ವಿಚಾರಣೆ ವೇಳೆ ಪತಿಯು ತಾನು ನೀಡಬೇಕಾಗಿದ್ದ ಹಣದಲ್ಲಿ 26,600 ರೂಪಾಯಿಯನ್ನು 1 ರೂ., 2 ರೂ. ನಾಣ್ಯ ಹಾಗೂ 100 ರೂ. ಮುಖಬೆಲೆಯ 4 ನೋಟುಗಳನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕೊಟ್ಟಿದ್ದಾನೆ.
ಪತಿಯ ನಡೆಯಿಂದ ರೋಸಿ ಹೋದ ಪತ್ನಿ, ‘ನನಗೆ ಮತ್ತೊಂದು ರೀತಿ ಚಿತ್ರಹಿಂಸೆ ನೀಡಲು ಪತಿ ಹೀಗೆ ಮಾಡಿದ್ದಾನೆ. ನಾನು ಈ ಚಿಲ್ಲರೆ ಹಣವನ್ನು ಹೇಗೆ ಏಣಿಕೆ ಮಾಡಬೇಕು. ಯಾರು ಇಷ್ಟು ಚಿಲ್ಲರೆ ಹಣವನ್ನು ಪಡೆಯುತ್ತಾರೆ’ ಎಂದು ಆರೋಪಿಸಿದಳು.
ತನ್ನ ನಡೆಯನ್ನು ಸಮರ್ಥಿಸಿಕೊಂಡ ಪತಿ, ‘ನಾನು 100 ರೂ., 500 ರೂ. ಅಥವಾ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನೀಡಬೇಕು ಎಂದುಕೊಂಡಿದ್ದೆ. ಆದರೆ ಈ ಹಣವನ್ನು ಏಣಿಕೆ ಮಾಡಲು ಮೂರು ಜೂನಿಯರ್ ಗಳನ್ನು (ಮಕ್ಕಳನ್ನು) ಆಕೆಗೆ ನೀಡಿದ್ದೇನೆ. ಹೀಗಾಗಿ ಚಿಲ್ಲರೆ ಹಣವನ್ನೇ ನೀಡಿರುವೆ’ ಎಂದು ಹೇಳಿದ್ದಾರೆ.
ಹಣವನ್ನು ಏಣಿಕೆ ಮಾಡಲಾಗದೇ ಇರುವುದಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಜನೀಶ್ ಕೆ ಶರ್ಮಾ ಅವರು ವಿಚಾರಣೆಯನ್ನು ಎರಡು ದಿನಗಳ ಕಾಲ ಮುಂದೂಡಿದ್ದಾರೆ.

Leave a Reply