ನೀರು ಹಿಡಿಯುವ ವಿಷಯಕ್ಕೆ ಮಹಿಳೆಯೊಂದಿಗೆ ಯುವಕರಿಂದ ಅಸಭ್ಯ ವರ್ತನೆ!

ದಾವಣಗೆರೆ: ನೀರು ಹಿಡಿಯುವ ವಿಷಯಕ್ಕೆ ವಿವಾಹಿತ ಮಹಿಳೆಯೊಂದಿಗೆ ಗ್ರಾಮದ ಯುವಕರ ಗುಂಪೊಂದು ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನ ಹೀರೇ ಗಂಗೂರು ಗ್ರಾಮದಲ್ಲಿ ನಡೆದಿದೆ.

ಹೀರೇ ಗಂಗೂರು ಗ್ರಾಮದಲ್ಲಿ ರಾತ್ರಿ ವೇಳೆ ಕುಡಿಯುವ ನೀರು ಬಿಡಲಾಗುತ್ತದೆ. ಜುಲೈ 3ರಂದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಅದೇ ಗ್ರಾಮದ ಶ್ವೇತಾ ಎನ್ನುವ ವಿವಾಹಿತ ಮಹಿಳೆ ನೀರು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅದೇ ಗ್ರಾಮದ ಸೂರಪ್ಪ, ಶಿವು, ಮುದ್ದಪ್ಪ ಎನ್ನುವರು ಮದ್ಯ ಸೇವನೆ ಮಾಡಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆಯನ್ನು ಸಹ ಮಾಡಿದ್ದಾರೆ.

ಈ ವಿಚಾರವಾಗಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಮಹಿಳೆಯ ಮನೆಗೆ ನುಗ್ಗಿ ಅವರ ಆತ್ತೆ ಗಂಡನ ಮೇಲೆಯೂ ಸಹ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದ್ರು ಸಹ ಪಿಎಸ್‍ಐ ವೀರಭಸಪ್ಪ ಕುಸುಲಾಫುರ್ ಮಾತ್ರ ಆರೋಪಿಗಳನ್ನು ಬಂಧಿಸದೇ, ದೂರು ನೀಡಿದ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಕುಟುಂಬಸ್ಥರು ಎಸ್‍ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಅಲ್ಲದೆ ನಮಗೆ ಗ್ರಾಮದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಮೇಲೆ ಹಲ್ಲೆ ನಡೆಸಿದವರು ಬಲಾಡ್ಯರಾಗಿದ್ದು, ರಾಜಕೀಯ ಮುಖಂಡರು ಇವರನ್ನು ರಕ್ಷಣೆ ಮಾಡುತ್ತಿದ್ದಾರೆ. ನಮಗೆ ಗ್ರಾಮದಲ್ಲಿ ಜೀವನ ನಡೆಸುವುದಕ್ಕೂ ಭಯವಾಗುತ್ತದೆ. ಪೊಲೀಸ್ ಅಧಿಕಾರಿಗಳು ತಮಗೆ ರಕ್ಷಣೆ ನೀಡುವಂತೆ ಮಹಿಳೆ ಹಾಗೂ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *